ಸುಶಾಂತ್ ಸಾವಿನ ಸುದ್ದಿಯಲ್ಲಿ ಹಲವಾರು ಮಂದಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದಾರೆ, ಅದರಲ್ಲಿ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಸಹ ಒಬ್ಬರು. ಮೊದಲಿಗೆ ನೆಪೋಟಿಸಮ್ ಆರೋಪದಿಂದ ಸದ್ದು ಮಾಡಿದ ಪ್ರಕರಣಕ್ಕೆ ನಂತರದಲ್ಲಿ ರಾಜಕೀಯದ ನಂಟು ಇರುವ ಅನುಮಾನ ಹುಟ್ಟಿತು. ಕಂಗನಾ ರಣಾವತ್ ಅವರು ನೇರವಾಗಿ ಆದಿತ್ಯ ಠಾಕ್ರೆ ಅವರನ್ನು ಈ ಪ್ರಕರಣಕ್ಕೆ ಎಳೆತಂದಿದ್ರು. ಇದೀಗ ಇಷ್ಟು ದಿನದ ಸೈಲೆಂಟ್ ಆಗಿದ್ದ ಆದಿತ್ಯ ಠಾಕ್ರೆ ಅವರು ಈ ವಿಚಾರವಾಗಿ ಮೌನ ಮುರಿದಿದ್ದಾರೆ.
ಟ್ವಿಟ್ಟರ್‌ನಲ್ಲಿ ಆದಿತ್ಯ ಠಾಕ್ರೆ ಅವರು ಈ ಬಗ್ಗೆ ಮಾತನಾಡಿದ್ದು, “ಸುಶಾಂತ್ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ನನ್ನ ಹೆಸರು ಹೇಳುತ್ತಿರುವುದು ಕೆಟ್ಟ ರಾಜಕೀಯ ತಂತ್ರ” ಎಂದಿದ್ದಾರೆ. ಅಷ್ಟೇ ಅಲ್ದೇ “ ಮಹಾರಾಷ್ಟ್ರ ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾಗದ ಕೆಲವರು ಅದಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಸುಶಾಂತ್ ಸಾವಿನ ಪ್ರಕರಣದ ಜೊತೆಗೆ ನನ್ನ ಹೆಸರನ್ನು ಸೇರಿಸುತ್ತಿದ್ದಾರೆ. ಇದರಲ್ಲಿ ಠಾಕ್ರೆ ಕುಟುಂಬಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶವಿದೆ” ಎಂದಿದ್ದಾರೆ. ನನಗೆ ಕೆಲವು ಸಿನಿಮಾ ಗಣ್ಯರ ಜೊತೆಗೆ ಸಂಪರ್ಕ ಇದೆ. ಆದರೆ ಅದು ಅಪರಾಧವಲ್ಲ. ಸುಶಾಂತ್ ಸಿಂಗ್ ಸಾವು ವಿಷಾಧಕರ. ಆದರೆ ಕೆಲವರು ಸಾವಿನ ಲಾಭವನ್ನು ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ’’ ಎಂದು ಆರೋಪಿಸಿದ್ದಾರೆ.
ಇದೇ ವೇಳೆ “ನಾನು ಹಿಂದೂ ಹೃದಯಸಾಮ್ರಾಟ ಬಾಳಾಸಾಹೇಬ್ ಠಾಕ್ರೆ ಮೊಮ್ಮಗ. ನಾನು ಮಹಾರಾಷ್ಟ್ರಕ್ಕೆ, ಠಾಕ್ರೆ ಕುಟುಂಬಕ್ಕೆ ಕೆಟ್ಟ ಹೆಸರು ಬರುವ ಕಾರ್ಯವನ್ನು ಎಂದಿಗೂ ಮಾಡುವುದಿಲ್ಲ” ಎಂದು ಹೇಳುವ ಮೂಲಕ ತಮ್ಮ ವಿರುದ್ಧದ ಆರೋಪಗಳನ್ನು ಆದಿತ್ಯ ಠಾಕ್ರೆ ತಳ್ಳಿಹಾಕಿದ್ದಾರೆ.








