ಮುಂಬೈ: ಈಗಾಗಲೇ 14 ದಿನಗಳ ಮುಂಬೈನ ಬೈಖುಲ್ಲಾ ಜೈಲಿನಲ್ಲಿರುವ ರಿಯಾ ಸೆರೆವಾಸ ಮುಂದುವರಿಯಲಿದೆ. ಡ್ರಗ್ಸ್ ಲಿಂಕ್ ನಲ್ಲಿ ಬಂಧನವಾಗಿರುವ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿಗೆ ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನವನ್ನ ಮುಂದುವರಿಸುವಂತೆ ಮುಂಬೈನ ಎನ್ ಡಿಪಿಎಸ್ ವಿಶೇಷ ನ್ಯಾಯಾಲಯವು ಆದೇಶಿಸಿದೆ.
ಮೊದಲಿಗೆ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸಿಬಿಐ , ಇಡಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದ ರಿಯಾಗೆ ಬಳಿಕ ಡ್ರಗ್ಸ್ ನಂಟು ಇರುವುದು ಗೊತ್ತಾಗಿತ್ತು. ಇದಾದ ಬಳಿಕ ಪ್ರಕರಣಕ್ಕೆ ಎನ್ ಸಿಬಿ ಎಂಟ್ರಿಯಾಗಿತ್ತು. ಎನ್‍ಸಿಬಿ ವಿಚಾರಣೆ ವೇಳೆ ಸುಶಾಂತ್ ಗಾಗಿ ಡ್ರಗ್ಸ್ ಖರೀದಿ ಮಾಡುತ್ತಿರುವ ಬಗ್ಗೆ ರಿಯಾ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಇತ್ತ ಶೌವಿಕ್ ತನ್ನ ಅಕ್ಕನ ಸೂಚನೆ ಮೇರೆಗೆ ಪೆಡ್ಲರ್ ಗಳನ್ನು ಸಂಪರ್ಕಿಸಿ ಡ್ರಗ್ಸ್ ಖರೀದಿ ಮಾಡುತ್ತಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದು ರಿಯಾಗೆ ದೊಡ್ಡ ಆಘಾತ ಉಂಟಾಗಿತ್ತು. ಡ್ರಗ್ಸ್ ಖರೀದಿಗಾಗಿ ನಡೆಸಿರುವ ಕೆಲ ವಾಟ್ಸಪ್ ಚಾಟ್ ಫೋಟೋಗಳು ಸಹ ವೈರಲ್ ಆಗಿತ್ತು.