ಚಿಕ್ಕಮಗಳೂರು: ಪಾಪಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಅನುಮಾನಗೊಂಡು 5 ವರ್ಷದ ಮಗುವನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು (Chikkamgaluru) ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೇ ಸ್ಟೇಷನ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ ಕೊಲೆ ಮಾಡಿರುವ ಪಾಪಿ ತಂದೆ. ಈತ 7 ವರ್ಷಗಳ ಹಿಂದೆ ಮಂಗಳ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ತಿಂಗಳ ನಂತರ ಮಂಗಳ ಗರ್ಭಿಣಿಯಾಗಿದ್ದಳು. ಹೀಗಾಗಿ ಆತನಿಗೆ ಮಗುವಿನ ಮೇಲೆ ಅನುಮಾನ ಮೂಡಿತ್ತು.
ಇದರಿಂದ ಆತ ಕುಡಿತದ ಚಟಕ್ಕೂ ಬಿದ್ದಿದ್ದ. ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಸೆ. 19ರಂದು ಅನಾರೋಗ್ಯದಿಂದ ಮಗು ಮನೆಯಲ್ಲಿ ಮಲಗಿದ್ದಾಗ ಒಲೆ ಊದುವ ಕೊಳವೆಯಿಂದ ಮಗುವಿನ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಮಗುವಿನ ಮೇಲೆ ಯಾರೋ ಅತ್ಯಾಚಾರ ನಡೆಸಿದ್ದಾರೆಂದು ಬಿಂಬಿಸಲು ಯತ್ನಿಸಿದ್ದಾನೆ. ಸದ್ಯ ಪೊಲೀಸರು ಆರೋಪಿ ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.