ಬೆಂಗಳೂರು: ಸ್ವಾಮೀಜಿಗಳು ಮಾತನಾಡುವಾಗ ಸಂದರ್ಭ ನೋಡಿ ಮಾತನಾಡಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಹೇಳಿಕೆ ತಪ್ಪು ಅನ್ನಲಾಗುವುದಿಲ್ಲ. ಆದರೆ, ಎಲ್ಲದಕ್ಕೂ ಸಮಯ, ಸಂದರ್ಭ ನೋಡಿ ಮಾತನಾಡಬೇಕು. ಸಿಎಂ, ಡಿಸಿಎಂ ಹುದ್ದೆಗಳ ವಿಚಾರ ಪ್ರಸ್ತುತ, ಅಪ್ರಸ್ತುತ ಅಂತ ಅಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿ ಮಾಡಿದ್ದೆವು. ಈ ವೇಳೆ ರಾಜಕೀಯವಾಗಿ ಚರ್ಚೆ ಮಾಡಿದ್ದೇವೆ. ಆದರೆ, ಹೆಚ್ಚುವರಿ ಡಿಸಿಎಂ ಕುರಿತು ಪ್ರಸ್ತಾಪ ಮಾಡಿಲ್ಲ. ಅವರ ಅಭಿಪ್ರಾಯಗಳನ್ನು ಎಲ್ಲರೂ ಹೇಳ್ತಿದಾರೆ ಅಷ್ಟೇ. ಆದರೆ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೆಂಪೇಗೌಡರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ್ದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ (Chandrashekharnath Swamiji), ಡಿಕಿಶಿಗೆ ಸಿದ್ದರಾಮಯ್ಯನವರು ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿಕೆ ನೀಡಿದ್ದರು.
ಆನಂತರ ಶ್ರೀಶೈಲ ಸ್ವಾಮೀಜಿ ಹಾಗೂ ರಂಭಾಪುರಿ ಶ್ರೀಗಳು ಲಿಂಗಾಯತರಿಗೆ ಸಿಎಂ ಸ್ಥಾನ ನೀಡುವಂತೆ ಮನವಿ ಮಾಡಿದ್ದರು.ಇದು ರಾಜಕೀಯ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ.