ನಿಮಗಿತ್ತಾ ಈ ಮಳೆಗಾಲದ ಅನುಭವ: Marjala manthana rain day
ಮೊದಲ ಮಳೆ ಭೂಮಿಗೆ ಹನುಕಿದ ದಿನವೇ, ಆ ವರ್ಷದ ಮಳೆಯ ಸರಾಸರಿ ಅಂದಾಜು ಲೆಕ್ಕಾಚಾರ ಹಾಕುವ ವಯೋವೃದ್ಧರು ಆರಿದ್ರಾ ಮಳೆ ಜೋರು, ಮೃಗಶಿರಾ ಮಳೆ ಸಾಧಾರಣ, ಪುಷ್ಯಾ ಮಳೆ ಹೇಳ್ಕೊಳ್ಳೋ ಹಾಗಿಲ್ಲ, ಪುನರ್ವಸು ಮಳೆ ಅಡ್ಡಿಯಿಲ್ಲ ಅನ್ನುವ ಮಾತಾಡ್ತಾ ಇರ್ತಾರೆ.. ಇಂತದ್ದು ನಿಮ್ಮ ಕಿವಿಗೂ ಬಿದ್ದಿರುತ್ತೆ.. ಕೊನೆಯಲ್ಲಿ ಅದೇ ವೃದ್ಧರು ಉಪಸಂಹಾರಕ್ಕೆ ಎಂಬಂತೆ ಒಂದು ಮಾತಾಡಿ ಎದ್ದು ಬಿಡ್ತಾರೆ.. “ಎಂತದ್ದೇ ಹೇಳು ಮಾರಾಯ ನಮ್ ಕಾಲದಲ್ಲಿ ಇತ್ತಲ್ಲ ಆ ಮಳೆ ಈಗಿಲ್ಲ ಕಣ”
ಅವತ್ತಿನ ಟಾಕು ಇವತ್ತಿಗೆ ಸಂಪೂರ್ಣ ಉಲ್ಟಾ! ಇವತ್ತಿನ ಮಳೆಗಾಲದಲ್ಲಿ ಪುನರ್ವಸು-ಪುಷ್ಯಾ ಮಳೆಗಳೇ ಡ್ಯಾಂ ತುಂಬಿಸುತ್ತಿದೆ, ಗುಡ್ಡ ಕುಸಿಯುವಂತೆ ಧೋ ಅಂತ ಸುರಿಯುತ್ತಿದೆ, ಮಲೆನಾಡು ಮತ್ತು ಕರಾವಳಿ ಹತ್ತಾರು ಹಳ್ಳಿಗಳಿಗೆ ಜಲದಿಗ್ಬಂಧನ ಹಾಕುತ್ತವೆ. Marjala manthana rain day
***
ಇವತ್ತು ಚಕ್ಕಳಂಬಕ್ಕಳ ಹಾಕಿ ಕುಳಿತು ಯೋಚಿಸಿದ್ರೆ ನಮಗೂ ಹಾಗೇ ಅನ್ನಿಸುತ್ತೆ. ನಮ್ಮ ಕಾಲದಲ್ಲಿ, ನಾವು ಕಳೆದ ಬಾಲ್ಯದಲ್ಲಿ, ಬೆಳೆದ ತಾರುಣ್ಯದಲ್ಲಿ ಕಂಡ ಧಾರಾಕಾರ ಕುಂಬದ್ರೋಣ ಮಳೆಯ ವೇಗ, ಅಬ್ಬರ, ಸೊಗಡು, ಸಂಸ್ಕ್ರತಿ, ಥಂಡಿ, ರಚ್ಚೆ, ಒನಪು, ಭಯಾನಕತೆ, ರಮ್ಯತೆ ದಿವ್ಯತೆ ಯಾವುದೂ ಈಗಿಲ್ಲ. ಹಾಗೆ ಹೇಳುವ ಹಳೇ ಮುದುಕರಂತೆ ಈಗ ನಮಗೂ ನಮ್ಮ ಮಳೆಗಾಲದ ದಿನಗಳು ತನಗರಿವಿಲ್ಲದಂತೆ ಸ್ಮೃತಿ ಪಟಲದೊಳಗೆ ಅಂಕದ ಪರದೆ ಎತ್ತಿ ನಿಲ್ಲುತ್ತವೆ.
***
‘ಲಿಟಲ್ ಫ್ಲವರ್ ಸ್ಕೂಲ್’ ಅನ್ನುವ ಕಾನ್ವೆಂಟಿಗೆ ಹೋಗುತ್ತಿದ್ದಾಗ ಪಕ್ಕದಲ್ಲಿ ನಡೆದು ಬರ್ತಿದ್ದ ಬಾಲ್ಯದ ಆಪ್ತಮಿತ್ರ ವಿಶ್ವನಾಥ (ಈಗಲೂ ಆತ್ಮೀಯ ಗೆಳೆಯನೇ, ಸದ್ಯ ವರ್ಕ್ ಫ್ರಂ ಹೋಮ್ ನೆಪದಲ್ಲಿ ಊರಲ್ಲಿ ಮಳೆಗಾಲ ಎಂಜಾಯ್ ಮಾಡ್ತಾ ಹೊಟ್ಟೆ ಉರಿಸ್ತಿದ್ದಾನೆ)ನಿಗೆ ಕೆಸರು ಹಾರಿಸಬೇಕು ಅಂತ ಗುಂಡಿಯ ನೀರು ಹಾರಿಸುತ್ತಿದ್ದ ನೆನಪು, ಅಪ್ಪ ಕೊಡಿಸಿದ್ದ ಉದ್ದ ಕೋಲಿನ ಕೋವಿ ಛತ್ರಿಯ ಹಿಡಿಕೆ ಹಿಡಿದು ಮಳೆಯಲ್ಲಿ ನೆನಯುತ್ತಾ ಕುದುರೆಯಂತೆ ಓಡೋಡಿ ಬಂದಿದ್ದು, ಮಳೆ ಬರುತ್ತಿದ್ದಾಗಲೇ ಭೋರ್ಗರೆದು ಬೀಸುತ್ತಿದ್ದ ಗಾಳಿಗೆ ಮಗ್ಗುಲು ತಿರುಗಿಸಿ ಬೆತ್ತಲಾಗಿ ಹುಡುಗಿಯರ ಕಿಸಕ್ ನಗುವಿಗೆ ಕಾರಣವಾಗಿದ್ದ ಬಟನ್ ಛತ್ರಿ, ಗಟ್ಟಿ ಕಡ್ಡಿಗಳ ಚತ್ರಿಯಲ್ಲಿ ತಿರುಗಿಸಿ ಉಲ್ಟಾ ಹಿಡಿದು ಸೂರಿನ ನೀರು ತೋಡಿಕೊಂಡು ಆಟವಾಡಿದ್ದು, ಅಮೃತಾಂಜನ್ ಡಬ್ಬಿಯಲ್ಲಿ ಗೊಜಮಟ್ಟೆ ಹನಿಮೀನುಗಳನ್ನು ತುಂಬಿ ಪಾಕೆಟ್ ಅಕ್ವೇರಿಯಂನಂತೆ ಸಂಭ್ರಮಿಸಿದ್ದು. ಒಂದೇ ದಿನಕ್ಕೆ ಆ ಎಲ್ಲಾ ಗೊಜಮೊಟ್ಟೆ ಸತ್ತು ಕೊಳೆತು ವಾಸನೆ ಹೊಡೆದಿದ್ದು, ಗೊಜಮಟ್ಟೆ ಪುಟ್ಟ ಕಪ್ಪೆಗಳಾಗಿ ರೂಪಾಂತರ ಹೊಂದಿ ಮನೆಯ ಮೂಲೆ ಮೂಲೆ ತುಂಬಿಕೊಳ್ಳುತ್ತಿದ್ದಿದ್ದು ಇವೆಲ್ಲವೂ ಒಂದಕ್ಕಿಂತ ಒಂದು ಅತಿ ರಮ್ಯ ನೆನಪುಗಳು.
***
ಮಳೆಗಾಲ ಶುರುವಾತಿಗೆ ವಾರ ಮುಂಚೆ ಬರುವ ಕೊಡೆ ಕಡ್ಡಿ ರಿಪೇರಿ ಮಾಡುವಾತ, ಚತ್ರಿ ಕಡ್ಡಿಗೆ ತಂತಿ ಬಿಗಿದು ಗಟ್ಟಿ ಮಾಡಿ, ಹರಿದು ಹೋದ ಕೊಡೆ ಬಟ್ಟೆಗೆ ತ್ಯಾಪೆ ಹಾಕಿ 2 ರೂಪಾಯಿ ಸರ್ವೀಸ್ ಚಾರ್ಜು ತೆಗೆದುಕೊಳ್ಳುವ ಬಿಳಿಗಡ್ಡದ ಅಲೆಮಾರಿ ಬುಡೇನ್ ಸಾಬು ಮತ್ತವನ ಛತ್ರಿ ರಿಪೇರಿ ಕಾಯಕ ಶ್ರದ್ಧೆ.
ಅದೊಂದು ಕೊಡೆ ಮಾತ್ರ ಶತಮಾನದ ಇತಿಹಾಸ ಹೊಂದಿತ್ತು. ಪ್ರಾಯಶಃ 90 ರಂಜಾನ್ ಉಪವಾಸ ಮುಗಿಸಿದ್ದ ಬುಡೇನ್ ಸಾಬುವಿಗಿಂತ ಹೆಚ್ಚು ಆ ಛತ್ರಿಗೆ ವಯಸ್ಸಾಗಿತ್ತೋ ಏನೋ! ಅದರ ಬಹುತೇಕ ಎಲ್ಲಾ ಕಡ್ಡಿಯ ಸಂದಿಗಳಿಗೂ ತಂತಿಯಿಂದ ಬಿಗಿದು ಕಟ್ಟಲಾಗಿತ್ತು. ಅದರ ಮರದ ಹಿಡಿಕೆಯ ಚರ್ಮ ಸುಕ್ಕುಗಟ್ಟಿ ಪಾರ್ಶವಾಯು ಹೊಡೆದಂತೆ ಸೊಟ್ಟಗಾಗಿತ್ತು. ಇನ್ನು ಅದರ ಕಬ್ಬಿಣದ ಮೈಕಟ್ಟು ಮೂಳೆ ಮುರಿದು ಚೊಂಟನಾದ ಫಕೀರನಂತೆಯೋ, ಪೋಲಿಯೋ ಪೀಡಿತನಂತೆಯೋ ಇತ್ತು.
ಆದ್ರೆ ಬ್ರಹ್ಮಾಂಡ ನಗು ತರಿಸುತ್ತಿದ್ದಿದ್ದು ಮಾತ್ರ ಆ ಆ್ಯಂಟಿಕ್ ಚತ್ರಿಯ ಮೈ ಬಟ್ಟೆ. ಇನ್ನು ತ್ಯಾಪೆ ಹಾಕಲು ಜಾಗವೇ ಇರಲಿಲ್ಲ ಅದರ ಹರಕಲು ಹರಕಲು ಮೈನಲ್ಲಿ. ಎಲ್ಲಿ ನೋಡಿದ್ರೂ, ತುರುಗಿಸಿ ಮುರುಗಿಸಿ ಇಣುಕಿದ್ರೂ ಅದ್ರ ಮೂಲ ಬಟ್ಟೆ ಕಾಣಿಸದಂತೆ ಅದರ ಮೈಯನ್ನು ತ್ಯಾಪೆಗಳೇ ಮುಚ್ಚಿ ಬಿಟ್ಟಿದ್ದವು. ಆದರೂ ಪ್ರತೀ ವರ್ಷ ಮಳೆಗಾಲಕ್ಕೆ ಮುಂಚೆ ಆ ಚತ್ರಿಗೆ ಸರ್ವೀಸ್ ಆಗುತ್ತಿತ್ತು. ತಲೆ ಕೆರದುಕೊಳ್ಳುತ್ತಲೇ ರಿಪೇರಿ ಮಾಡಿ ಹೋಗ್ತಿದ್ದ ಕೊಡೆ ಕಡ್ಡಿ ರಿಪೇರಿ ಮಾಡುವ ಬುಡೇನ್ ಸಾಬು. ನನಗೆ ನೆನಪಿರುವ ಮಟ್ಟಿಗೆ ಪ್ರಾಯಶಃ ಆ ಅಪೂರ್ವ ಹಾಗೂ ಅನೂಹ್ಯ ಛತ್ರಿ ತ್ಯಾಗರ್ತಿಯ ಮಹಾಬಲಗಿರಿ ರಾವ್ ಮಾಸ್ಟರ್ ತಾತಂದು ಅನ್ಸುತ್ತೆ.
***
ಕೊಡೆ ಹಿಡಿದು ಮಳೆಯಲ್ಲಿ ಸೈಕಲ್ ಹೊಡೆಯುವ ಮಜಾ ಇತ್ತಲ್ಲ ಅದನ್ನು ವಿವರಿಸೋಕೆ ಪದಗಳೇ ಇಲ್ಲ. ತ್ಯಾಗರ್ತಿಯ ಮಳೆಗಾಲ ಅತಿ ರಮ್ಯ; ರಸಕಾವ್ಯ, ಮಧುರಾ ಮಧುರಾ ಮಧುರಾ. ವಿವೇಕಾನಂದ್ ಹೈಸ್ಕೂಲ್ ಮೈದಾನದಲ್ಲಿ ಕೆರೆಯಂತೆ ನಿಲ್ಲುವ ನೀರಿನಲ್ಲಿ ಸೈಕಲ್ ರೇಸ್ ಮೋದ ಈಗ ನೆನಸಿಕೊಂಡರೂ ಮನಸನ್ನು ಹುಚ್ಚೆಬ್ಬಿಸುತ್ತದೆ. ಸುರಿವ ಮಳೆಯಲ್ಲಿ ಕ್ರಿಕೆಟ್ ಆಡ್ತಿದ್ದಿದ್ದು, ಕೆಂಪು ಜಂಬಿಟ್ಟಿಗೆ ಕಲ್ಲು ಕ್ವಾರಿಗಳ ಹೊಂಡದಲ್ಲಿ ಎಮ್ಮೆಗಳ ಸಂಗಡ ಸ್ವಿಮ್ಮಿಂಗ್ ಪ್ರಾಕ್ಟೀಸ್, ಈಶ್ವರ ದೇವಸ್ಥಾನದ ಕಲ್ಯಾಣಿ, ರಾಮತೀರ್ಥದ ದಂಡ ಮೇಲೆ ಕೂತು ಕಪ್ಪೆಗಳ ವಟರ್ ವಟರ್ ಸಂಗೀತ ಕಚೇರಿ ಕೇಳುತ್ತಿದ್ದಿದ್ದು, ನಾವಣಗೆರೆ ಕೆರೆ ಏರಿ ಮೇಲೆ ಕೊಡೆ ಹಿಡಿದು ವಾಕ್ ಮಾಡುತ್ತಿದ್ದಿದ್ದು, ಅಗಸರ ಹೊಳೆ ನೀರು ಹೊಸಂತೆ ರೋಡ್ ಅನ್ನು ಹೈಜಾಕ್ ಮಾಡಿದ್ದು, ಸಾಗರ ರೋಡ್ ನಲ್ಲಿ ಹಳ್ಳಕ್ಕೆ ಏರುವ ಹತ್ಮೀನುಗಳು, ಕಲ್ಲೇಡಿ, ಕಾರೇಡಿ, ಗೊಜಮಟ್ಟೆ ಹಿಡಿದು ಆಟವಾಡುತ್ತಿದ್ದ ಕಾಲ. ಒಂದೆರಡಲ್ಲಾ ನೂರಾರು ನೆನಪುಗಳಿವೆ ತ್ಯಾಗರ್ತಿ ಮಳೆಗಾಲದ ದಿನಗಳದ್ದು.
ಜಂಬಿಟ್ಟಿಗೆ ಕೊರೆದ ಕಲ್ಲು ಕ್ವಾರಿ ಗುಂಡಿಯಲ್ಲಿ ಸ್ವಿಮ್ಮಿಂಗ್ ಫೂಲ್ನಂತೆ ನಿಲ್ಲುವ ನೀರಿನಲ್ಲಿ ಈಜು ಕಲಿಯುವ ಉತ್ಸಾಹ. ಒರೆಸಿಕೊಂಡು, ಒಣಗಿಸಿಕೊಂಡರೂ ಮತ್ತೆ ಮತ್ತೆ, ತೇವಗೊಳ್ಳುವ ದೇಹ, ಮುದಗೊಳ್ಳುವ ಮನ, ಹಸಿವ ಹೊಟ್ಟೆ, ಮಳೆಗಾಲದ ಗಡದ್ ನಿದ್ದೆ, ಎದ್ದರೆ ಇಳಿಸಂಜೆಯ ಮೋಡ ಮುಸುಕಿದ, ಮಳೆ ನಿಂತ ವಾತಾವರಣದಲ್ಲೂ ಸಣ್ಣಗೆ ಜೋಂಪು, ಮತ್ತಿನ ಹ್ಯಾಂಗ್ ಓವರ್.
ತ್ಯಾಗರ್ತಿಯಲ್ಲಿ ಕಳೆದ ಅಷ್ಟೂ ಮಳೆಗಾಲ ಒಂದಿಲ್ಲೊಂದು ಅವಿಸ್ಮರಣೀಯ ನೆನಪುಗಳ ಖಜಾನೆಯನ್ನೇ ಮನಸಿನಲ್ಲಿ ಅವಿತಿಟ್ಟಿದೆ. ಇನ್ನು ಆಗುಂಬೆಯ ನೆನಪಂತೂ ಅತ್ಯದ್ಭುತ.. ಅದನ್ನು ಬರೆಯಲು ಕೂತರೆ ಆರೇಳು ಸಂಪುಟಕ್ಕಾಗುವಷ್ಟು ಮಹಾಗ್ರಂಥವಾಗುವ ಸರಕಿದೆ. ಸದ್ಯಕ್ಕಿಷ್ಟು ಸಾಕು ನಾವು ಮಲೆನಾಡಿನ ಮಂದಿ ಎಷ್ಟು ಪುಣ್ಯವಂತರು ಅಂತ ನೀವು ಹೊಟ್ಟೆಕಿಚ್ಚು ಪಡಲಿ ಅಂತ ಇಷ್ಟೆಲ್ಲಾ ಬರೆದೆ. ನಮ್ಮ ಕಾಲದ ಭಾಗ್ಯವಾಗಲೀ, ಮಳೆಗಾಲದ ಮೋಜಾಗಲೀ ಅಥವಾ ಸ್ವಚ್ಛಂದತೆಯಾಗಲೀ ಇವತ್ತಿನ ಮಕ್ಕಳಿಗಿಲ್ಲ ಅನ್ನೋ ವಿಷಾದ ಮತ್ತೆ ಮತ್ತೆ ಕಾಡತ್ತೆ.
-ವಿಭಾ
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ