ಅದು ಮೇ 21, 1997. ಸರಿಯಾಗಿ ಇಂದಿಗೆ 23 ವರ್ಷಗಳ ಹಿಂದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿತ್ತು ಯಾರು ಊಹಿಸದಂತಹ ಒಂದು ರೋಚಕ ಪಂದ್ಯ. ಅದು ಕೂಡ ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್. ಅಂದ ಮೇಲೆ ಹೇಳುವುದೇ ಬೇಡ. ಆ ಪಂದ್ಯದ ತೀವ್ರತೆ ಎಷ್ಟಿರಬಹುದು ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ.
ಹೌದು, ಪೆಪ್ಸಿ ಇಂಡಿಪೆಂಡೆನ್ಸ್ ಕಪ್ ಟೂರ್ನಿಯ ಆರನೇ ಪಂದ್ಯ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡ್ಕೊಂಡ ಪಾಕಿಸ್ತಾನ ಆರಂಭದಲ್ಲೇ ಶಾಹಿದ್ ಆಫ್ರಿದಿ ವಿಕೆಟ್ ಅನ್ನು ಕಳೆದುಕೊಂಡಿತ್ತು. ಆದ್ರೆ ಅವತ್ತು ಪಾಕಿಸ್ತಾನದ ಮತ್ತೊಬ್ಬ ಆರಂಭಿಕ ಸಯ್ಯದ್ ಅನ್ವರ್ ಭಾರತೀಯ ಬೌಲರ್‍ಗಳನ್ನು ಚಳಿಬಿಡಿಸಲೇ ಬೇಕು ಅಂತ ತೀರ್ಮಾನಿಸಿಯೇ ಕ್ರೀಸ್‍ಗೆ ಆಗಮಿಸಿದ್ದರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದ ಸಯ್ಯದ್ ಅನ್ವರ್ 26ನೇ ಓವರ್‍ನಲ್ಲೇ ತನ್ನ ಶತಕವನ್ನು ದಾಖಲಿಸಿದ್ದರು.
ಅಲ್ಲದೆ ಬಿರುಸಿನ ಬ್ಯಾಟಿಂಗ್ ಮೂಲಕ ದ್ವಿಶತಕ ದಾಖಲಿಸುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದ್ದರು. ಶತಕದ ನಂತರ ಕಪಿಲ್‍ದೇವ್ 175 ರನ್, ವಿವಿಯನ್ ರಿಚಡ್ರ್ಸ್ ಅವರ 189 ರನ್ ದಾಖಲೆಗಳನ್ನು ಅಳಿಸಿ ಹಾಕಿದ್ದರು. ಅಷ್ಟೇ ಅಲ್ಲ, ಇನ್ನೇನು ಶತಕಕ್ಕೆ ಆರು ರನ್‍ಗಳು ಬೇಕಿದ್ದವು. ಆಗ ತೆಂಡುಲ್ಕರ್ ಎಸೆತದಲ್ಲಿ ಗಂಗೂಲಿ ಕೈಗೆ ಕ್ಯಾಚ್ ಇತ್ತು ನಿರ್ಗಮಿಸಿದ್ದ ಸಯ್ಯದ್ ಅನ್ವರ್ ಅನ್ನೋ ದೈತ್ಯ ಕ್ರಿಕೆಟಿಗ ನಿರಾಸೆಯಿಂದಲೇ ಪೆವಿಲಿಯನ್‍ನತ್ತ ಹಿಂತಿರುಗಿದ್ದರು. ಅನ್ವರ್ ಪೆವಿಲಿಯನ್‍ಗೆ ಹಿಂತಿರುಗುವ ಮುನ್ನ ಇನಿಂಗ್ಸ್ ಮುಗಿಯಲು ಇನ್ನೂ ಮೂರು ಓವರ್‍ಗಳಿದ್ದವು.
ಅದಕ್ಕು ಮುನ್ನ ಅನ್ವರ್ 41ನೇ ಓವರ್ ನಲ್ಲಿ ಅನಿಲ್ ಕುಂಬ್ಳೆ ಅವರ ಒಂದೇ ಓವರ್ ನಲ್ಲಿ 26 ರನ್ ಸಿಡಿಸಿದ್ದರು. ಮೊದಲ ಎರಡು ಎಸೆತಗಳಲ್ಲಿ ತಲಾ ಎರಡು ರನ್ ಗಳಿಸಿದ್ದ ಅನ್ವರ್ ನಂತರದ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ್ದರು. ಅಂತಿಮ ಎಸೆತವನ್ನು ಬೌಂಡರಿಗಟ್ಟಿದ್ದರು. ಅಂತಿಮವಾಗಿ ಸಯ್ಯದ್ ಅನ್ವರ್ 206 ನಿಮಿಷಗಳಲ್ಲಿ 146 ಎಸೆತಗಳಲ್ಲಿ 22 ಬೌಂಡರಿ ಹಾಗೂ ಐದು ಸಿಕ್ಸರ್‍ಗಳ ಸಹಾಯದಿಂದ 194 ರನ್ ದಾಖಲಿಸಿದ್ದರು.
ಇದೀಗ ಸಯ್ಯದ್ ಅನ್ವರ್ ಅವರ ಈ ಮಹೋನ್ನತ್ತ ಸಾಧನೆಗೆ 23 ವರುಷ. ಈ ಪಂದ್ಯದಲ್ಲಿ ಮಾಡಿದ್ದ ದಾಖಲೆ 2009ರಲ್ಲಿ ಜಿಂಬಾಬ್ವೆಯ ಚಾಲ್ರ್ಸ್ ಕಾವೆಂಟ್ರಿ ಅವರು ಬಾಂಗ್ಲಾ ದೇಶದ ವಿರುದ್ಧ ಅಜೇಯ 194 ರನ್ ದಾಖಲಿಸಿದ್ದರು. ಆನಂತರ ಸಚಿನ್ ತೆಂಡುಲ್ಕರ್, ಸೆಹ್ವಾಗ್, ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ್ದರು.
ಆದ್ರೆ ಈ ಪಂದ್ಯದಲ್ಲಿ ಭಾರತೀಯರಿಗೆ ಸೋತಿರುವುದು ಒಂದು ನಿರಾಸೆಯಾದ್ರೆ, ರಾಹುಲ್ ದ್ರಾವಿಡ್ ಅವರ ಏಕದಿನ ಕ್ರಿಕೆಟ್‍ನ ಚೊಚ್ಚಲ ಶತಕ ಸಯ್ಯದ್ ಅನ್ವರ್ ಅವರ ಬಿರುಗಾಳಿಯ ಆಟದ ಮುಂದೆ ಮಂಕಾಗಿ ಹೋಯ್ತು. ಈ ಪಂದ್ಯದಲ್ಲಿ ಪಾಕಿಸ್ತಾನ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿತ್ತು. ಭಾರತ 49,2 ಓವರ್‍ಗಳಲ್ಲಿ 292 ರನ್ ಗಳಿಗೆ ಸರ್ವಪತನಗೊಂಡು 35 ರನ್ ಗಳಿಂದ ಸೋಲು ಅನುಭವಿಸಿತ್ತು.








