ಟೀಮ್ ಇಂಡಿಯಾಗೆ ಧೋನಿ ಆಯ್ಕೆ ಹೇಗಾಯ್ತು ಎಂಬುದರ ರಹಸ್ಯ ಬಿಚ್ಚಿಟ್ಟ ಸಯ್ಯದ್ ಕೀರ್ಮಾನಿ…!
ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿಯ ಹವಾ ಹೇಗಿತ್ತು ಎಂಬುದು ಬಹುತೇಕರಿಗೆ ಗೊತ್ತೇ ಇದೆ. ಅದೂ ಅಲ್ಲದೆ ಧೋನಿಯ ಜೀವನ ಚರಿತ್ರೆಯಲ್ಲಿ ಕೆಲವು ಗೊತ್ತಿರದ ಸಂಗತಿಗಳು ಕೂಡ ಬಹಿರಂಗಗೊಂಡಿವೆ. ಧೋನಿ ವೈಯಕ್ತಿಕ ಬದುಕು, ವೃತ್ತಿಪರ ಬದುಕು, ಅವರ ಹವ್ಯಾಸಗಳು, ಬಾಲ್ಯ, ಗೋಲ್ ಕೀಪರ್ ಆಗಿದ್ದವರು ವಿಕೆಟ್ ಕೀಪರ್ ಆಗಿದ್ದು ಹೀಗೆ ಎಲ್ಲವೂ ಗೊತ್ತಿರುವ ವಿಚಾರವೇ.
ಆದ್ರೆ ಈಗ ಇನ್ನೊಂದು ವಿಚಾರ ಬಹಿರಂಗಗೊಂಡಿದೆ. ಫೀಲ್ಡಿಂಗ್ ಮಾಡುತ್ತಿದ್ದ ಧೋನಿ ಪೂರ್ವ ವಲಯ ತಂಡಕ್ಕೆ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದು ಹೇಗೆ ಎಂಬುದು. ಈ ವಿಚಾರ ಯಾವತ್ತೂ ಬಹಿರಂಗವಾಗಿರಲಿಲ್ಲ. ಇದೀಗ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸಯ್ಯದ್ ಕೀರ್ಮಾನಿ ಈ ವಿಷ್ಯವನ್ನು ಬಹಿರಂಗಗೊಳಿಸಿದ್ದಾರೆ.
ನಿಮಗೆ ಸಯ್ಯದ್ ಕೀರ್ಮಾನಿ ಗೊತ್ತಿರಲೇಬೇಕು. 1983ರ ವಿಶ್ವಕಪ್ ವಿಜೇತ ತಂಡದ ವಿಕೆಟ್ ಕೀಪರ್. ಹಾಗೇ ಅವರು ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಎಂಬ ಹೆಗ್ಗಳಿಕೆಯೂ ಅವರಿಗಿದೆ. 2004ರಲ್ಲಿ ಕೀರ್ಮಾನಿಯವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಆಗ ಹಲವಾರು ಪ್ರತಿಭೆಗಳಿಗೆ ಅವಕಾಶ ಕೂಡ ಕೊಟ್ಟಿದ್ದರು. ಅದರಲ್ಲಿ ಧೋನಿ ಕೂಡ ಒಬ್ಬರು.
ಅಂದ ಹಾಗೇ ನಾವು ಈಗ ಮಾತನಾಡುತ್ತಿರುವುದು ಎಂಎಸ್ ಧೋನಿಯ ಬಗ್ಗೆ. ಕಳೆದ ಒಂದು ವರ್ಷದಿಂದ ವಿಶ್ರಾಂತಿ ಪಡೆಯುತ್ತಿರುವ ಧೋನಿಯಲ್ಲ. ಯುವಕನಾಗಿದ್ದ ಧೋನಿ ತನ್ನ ಅಬ್ಬರದ ಬ್ಯಾಟಿಂಗ್ ಮೂಲಕವೇ ಹೆಸರುವಾಸಿಯಾಗಿದ್ದರು. ಆಗ ಅವರು ಖರಗಪುರ ರೈಲ್ವೆ ಸ್ಟೇಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಸದ್ದು ಮಾಡುತ್ತಿದ್ದ ಧೋನಿ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದರು. ಅದು ಕೂಡ ಪೂರ್ವ ವಲಯ ತಂಡದ ಪರ. ಧೋನಿ ತನ್ನ ಸಿಗ್ನೇಚರ್ ಆಗಿದ್ದ ಭರ್ಜರಿ ಸಿಕ್ಸರ್‍ಗಳ ಮೂಲಕವೇ ಆಯ್ಕೆಗಾರರ ಮನಗೆದ್ದಿದ್ದರು. ಹೀಗೆ ಅವರು ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರು. ಈ ದೃಶ್ಯಗಳನ್ನು ನಾವು ಅವರ ಸಿನಿಮಾದಲ್ಲಿ ನೋಡಿದ್ದೇವೆ.
ಆದ್ರೆ ಆ ಸಿನಿಮಾದಲ್ಲಿ ಪ್ರಮುಖ ವಿಚಾರವೊಂದು ಇರಲಿಲ್ಲ. ಧೋನಿ ಪೂರ್ವ ವಲಯ ತಂಡಕ್ಕೆ ಹೇಗೆ ಆಯ್ಕೆಯಾಗಿದ್ದರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆ ವಿಷ್ಯವನ್ನು ಈಗ ಕೀರ್ಮಾನಿ ಹೇಳಿದ್ದಾರೆ. ಧೋನಿಯ ಆಯ್ಕೆಯ ಹಿಂದೆ ಸಯ್ಯದ್ ಕೀರ್ಮಾನಿಯವರ ದಿಟ್ಟ ನಿರ್ಧಾರವೂ ಇದೆ.
ನಾನು ಈ ಹಿಂದೆ ಯಾವತ್ತೂ ಹೇಳಿಕೊಂಡಿರಲಿಲ್ಲ. ಆದ್ರೆ ಈಗ ಹೇಳುತ್ತೇನೆ ಧೋನಿ ಹೇಗೆ ಆಯ್ಕೆಯಾದರು ಎಂಬುದನ್ನು. ನಾನು
ಮತ್ತು ಪ್ರಣವ್ ರಾಯ್ (ಪೂರ್ವ ವಲಯದ ಆಯ್ಕೆ ಸಮಿತಿ ಸದಸ್ಯ) ರಣಜಿ ಪಂದ್ಯವೊಂದನ್ನು ವೀಕ್ಷಣೆ ಮಾಡುತ್ತಿದ್ದೇವು. ಆದ್ರೆ ನನಗೆ ಯಾವ ಪಂದ್ಯ ಅಂತ ನೆನಪಿಗೆ ಬರುತ್ತಿಲ್ಲ. ಸುಮಾರು ವರ್ಷಗಳಾಗಿವೆ. ಆದ್ರೆ ಅದಕ್ಕೆ ಪ್ರಣವ್ ರಾಯ್ ಸಾಕ್ಷಿ. ಜಾರ್ಖಡ್‍ನ ಒಬ್ಬ ಹುಡುಗ ಆಡುತ್ತಿದ್ದಾನೆ. ಆತ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್. ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿದ್ದಾನೆ. ಆಯ್ಕೆಗೆ ಸಮರ್ಥನಾಗಿದ್ದಾನೆ ಅಂತ ಪ್ರಣವ್ ರಾಯ್ ನನಗೆ ಹೇಳಿದ್ದರು.
ಆಗ ನಾನು ಹೇಳಿದ್ದೆ. ಆತ ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡ್ತಾನಾ ಅಂತ. ಅದಕ್ಕೆ ಪ್ರಣವ್ ರಾಯ್, ಇಲ್ಲ. ಫೈನ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾನೆ ಅಂತ ಹೇಳಿದ್ದರು. ಹಾಗೇ ನಾನು ಧೋನಿಯವರ ಎರಡು ವರ್ಷಗಳ ಆಟದ ಪ್ರದರ್ಶನ ಮತ್ತು ಸಾಧನೆಯ ಪಟ್ಟಿಯನ್ನು ತರಿಸಿಕೊಂಡೆ. ವಾಹ್ಹ್,, ಅದ್ಭುತವಾಗಿ ಆಡಿದ್ದಾನೆ. ಸ್ಥಿರ ಪ್ರದರ್ಶನವನ್ನು ನೀಡಿದ್ದಾನೆ ಅಂತ ನಾನು ಹೇಳಿದ್ದೆ. ಅಷ್ಟೇ ಅಲ್ಲ, ನಾನು ಆತನ ವಿಕೆಟ್ ಕೀಪಿಂಗ್ ಕೂಡ ನೋಡಿರಲಿಲ್ಲ. ತಕ್ಷಣವೇ ಧೋನಿಯನ್ನು ಪೂರ್ವ ವಲಯ ತಂಡಕ್ಕೆ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದೆ ಅಂದಿದ್ದರು ಸಯ್ಯದ್ ಕೀರ್ಮಾನಿ. ನಂತರ ನಡೆದದ್ದು ಎಲ್ಲಾ ಇತಿಹಾಸ.
ಕೀರ್ಮಾನಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದಾಗ ಟೀಮ್ ಇಂಡಿಯಾದಲ್ಲಿ ಖಾಯಂ ವಿಕೆಟ್ ಕೀಪರ್ ಯಾರು ಇರಲಿಲ್ಲ. ನಯನ್ ಮೊಂಗಿಯಾ ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ತಂಡದಿಂದ ಹೊರಗುಳಿದಿದ್ದರು. ಆನಂತರ ಸಮೀರ್ ದೀಘೆ, ಅಜಯ್ ರಾತ್ರಾ, ದೀಪ್ ದಾಸ್ ಗುಪ್ತಾ, ಪಾಥೀವ್ ಪಟೇಲ್, ದಿನೇಶ್ ಕಾರ್ತಿಕ್ ಹೀಗೆ ಪ್ರತಿಭಾವಂತ ವಿಕೆಟ್ ಕೀಪರ್‍ಗಳಿದ್ದರೂ ಬ್ಯಾಟಿಂಗ್‍ನಲ್ಲಿ ವೈಫಲ್ಯ ಅನುಭವಿಸುತ್ತಿದ್ದರು. ಕೊನೆಗೆ ಹೆಚ್ಚುವರಿ ಬ್ಯಾಟ್ಸ್ ಮೆನ್ ತಂಡಕ್ಕೆ ಬೇಕು ಅಂದಾಗ ರಾಹುಲ್ ದ್ರಾವಿಡ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿದ್ದರು. 2003ರ ವಿಶ್ವಕಪ್ ನಲ್ಲಿ ದ್ರಾವಿಡ್ ಬ್ಯಾಟಿಂಗ್ ಜೊತೆ ವಿಕೆಟ್ ಕೀಪಿಂಗ್ ಸಹ ಮಾಡಿದ್ದರು.
ಆದ್ರೆ ಧೋನಿ ಬಂದ ನಂತರ ಸುಮಾರು 10-15 ವರ್ಷಗಳ ವಿಕೆಟ್ ಕೀಪರ್ ಸಮಸ್ಯೆ ಆಗಿರಲಿಲ್ಲ. ಈಗ ಮತ್ತೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್ ಮೆನ್‍ಗಳ ಸಮಸ್ಯೆ ಕಾಡುತ್ತಿದೆ. ವೃದ್ದಿಮಾನ್ ಶಾ, ರಿಷಬ್ ಪಂತ್ ಇದ್ರೂ ಕೂಡ ಭರವಸೆ ಮೂಡಿಸಿಲ್ಲ.
ಒಟ್ಟಿನಲ್ಲಿ ಸಯ್ಯದ್ ಕೀರ್ಮಾನಿಯವರ ಆ ಒಂದು ದಿಟ್ಟ ನಿರ್ಧಾರದಿಂದ ಟೀಮ್ ಇಂಡಿಯಾಗೆ ಹಾಗೂ ವಿಶ್ವಕ್ರಿಕೆಟ್‍ಗೆ ಅದ್ಭುತ ನಾಯಕ ಹಾಗೂ ಶ್ರೇಷ್ಠ ವಿಕೆಟ್ ಕೀಪರ್ ರೂಪುಗೊಳ್ಳುವಂತೆ ಮಾಡಿತ್ತು.








