ಉಳ್ಳಾಲ ಸಮುದ್ರದಲ್ಲಿ ಹಡಗು ಮುಳುಗಡೆ –ತೈಲ ಸೋರಿಕೆಯ ಭೀತಿ….
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯ ಉಳ್ಳಾಲ ಸಮುದ್ರ ತೀರದ ೧.೫ ನಾಟಿಕಲ್ ಮೈಲ್ ದೂರದಲ್ಲಿ ಸರಕು ಸಾಗಾಟದ ಪ್ರಿನ್ಸೆಸ್ ಮಿರಾಲ್ ನೌಕೆ ಮುಳುಗಡೆಯಾಗುತ್ತಿದ್ದು, ತೈಲ ಸೋರಿಕೆಯ ಭೀತಿ ಉಂಟಾಗುತ್ತಿದೆ.
ಜೂನ್ 23 ರಂದು ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಕಡಲ ತೀರದಲ್ಲಿ ಸಿರಿಯಾ ದೇಶದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಮುಳುಗಡೆಯಾಗಲು ಶುರುವಾಗಿತ್ತು. ಚೀನಾದಿಂದ ಹೊರಟಿದ್ದ ಹಡುಗು ಲೆಬನಾನ್‌ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು.
ಹಡಗು ಮುಳುಗಡೆ ವೇಳೆ ಇಂಡಿಯನ್ ಕೋಸ್ಟ್ ಗಾರ್ಡ್ ಅದರಲ್ಲಿದ್ದ 15 ಸಿಬ್ಬಂದಿಯ ರಕ್ಷಣೆ ಮಾಡಿತ್ತು. ಆದರೆ ಇದೀಗ ತೈಲ ಸೋರಿಕೆ ಬಗ್ಗೆ ಆತಂಕ ಸೃಷ್ಟಿಯಾಗಿದೆ.
ಎಂ.ವಿ. ಪ್ರಿನ್ಸೆಸ್ ಮಿರಾಲ್ ಹಡಗಿನ ಸುತ್ತ ಕಟ್ಟೆಚ್ಚರ ವಹಿಸಲಾಗಿದೆ. ಹಡಗಿನ ಸುತ್ತ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿದೆ. ಗಾಳಿ ತುಂಬಿದ ಬೂಮ್‌ಗಳನ್ನು ಬಳಸಿ ಬ್ಯಾರಿಕೇಡ್ ರಚಿಸಲಾಗಿದ್ದು, ಯಾವುದೇ ಅಪಾಯ ಸಂಭವಿಸದಂತೆ ಕೋಸ್ಟ್ ಗಾರ್ಡ್ ನೌಕೆ ಹದ್ದಿನ ಕಣ್ಣಿರಿಸಿದೆ.
ತೈಲ ಸೋರಿಕೆಯಾದರೆ ಮೀನುಗಳು ನಾಶವಾಗಿ, ಮೀನುಗಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ತೈಲ ಸೋರಿಕೆ ಆತಂಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಲರ್ಟ್ ಆಗಿದೆ. ತೈಲ ಸೋರಿಕೆಯಾದರೆ, ಮುಂದಿನ ಕ್ರಮಗಳ ಬಗ್ಗೆ ದ.ಕ. ಡಿಸಿ ಡಾ. ರಾಜೇಂದ್ರ ಮಾನಿಟರ್ ಮಾಡುತ್ತಿದ್ದಾರೆ.








