ಟಿ-20 ಕ್ರಿಕೆಟ್ -ಲಂಕಾ ವಿರುದ್ಧದ ಬಲಿಷ್ಠ ಟೀಮ್ ಇಂಡಿಯಾದ ಅಂತಿಮ 11ರ ಬಳಗ..!
ಏಕದಿನ ಸರಣಿಯನ್ನು 2-1ರಿಂದ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಈಗ ಲಂಕಾ ವಿರುದ್ಧ ಟಿ-ಟ್ವೆಂಟಿ ಸರಣಿ ಗೆಲ್ಲುವತ್ತ ಚಿತ್ತವನ್ನಿಟ್ಟಿದೆ.
ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು (ಜುಲೈ 25) ಪ್ರೇಮದಾಸ ಮೈದಾನ ದಲ್ಲಿ ನಡೆಯಲಿದೆ.
ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಐವರು ಆಟಗಾರರಿಗೆ ಅವಕಾಶ ನೀಡುವ ಮೂಲಕ ಟೀಮ್ ಇಂಡಿಯಾ ಪ್ರಯೋಗ ನಡೆಸಿತ್ತು. ಆದ್ರೆ ಈ ಪ್ರಯೋಗದಲ್ಲಿ ಟೀಮ್ ಇಂಡಿಯಾ ವೈಫಲ್ಯ ಅನುಭವಿಸಿತ್ತು. ಹಾಗಾಗಿ ಟೀಮ್ ಇಂಡಿಯಾ ಮತ್ತೆ ಟಿ-ಟ್ವೆಂಟಿಯ ಮೊದಲ ಪಂದ್ಯದಲ್ಲಿ ಪ್ರಯೋಗಕ್ಕೆ ಇಳಿಯುವುದು ದೂರದ ಮಾತಾಗಿದೆ. ಬಲಿಷ್ಠ 11ರ ಬಳಗದೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ.
ಇನ್ನೊಂದೆಡೆ ಸತತ ಸೋಲಿನಿಂದ ಸುಸ್ತಾಗಿದ್ದ ಶ್ರೀಲಂಕಾ ತಂಡ ಈಗ ಗೆಲುವಿನ ನಗೆ ಬೀರಿದ್ದು ತಂಡದ ವಿಶ್ವಾಸವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿದೆ. ಪ್ರೇಮದಾಸ ಮೈದಾನದಲ್ಲಿ ಸ್ಪಿನ್ ಬೌಲರ್ ಗಳು ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ.
ಹಾಗೇ ಟಾಸ್ ಕೂಡ ಇಲ್ಲಿ ಹೆಚ್ಚು ಮಹತ್ವವನ್ನು ಮಹಿಸುತ್ತದೆ. 18 ಬಾರಿ ಚೇಸಿಂಗ್ ಮಾಡಿದ್ದ ತಂಡ ಗೆಲುವು ದಾಖಲಿಸಿದ್ರೆ, 17 ಬಾರಿ ಸೋಲು ಅನುಭವಿಸಿದೆ. ಹೀಗಾಗಿ ಪಿಚ್ ಹೇಗೆ ವರ್ತಿಸುತ್ತೆ ಎಂಬುದನ್ನು ನಿಖರವಾಗಿ ಹೇಳಲು ಕೂಡ ಸಾಧ್ಯವಿಲ್ಲ.
ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳು ಇಲ್ಲಿಯವರೆಗೆ 19 ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದೆ. ಇದರಲ್ಲಿ 13 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ರೆ, ಐದು ಪಂದ್ಯಗಳನ್ನು ಮಾತ್ರ ಶ್ರೀಲಂಕಾ ಗೆದ್ದುಕೊಂಡಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ.
ಹಾಗೇ ಶ್ರೀಲಂಕಾದಲ್ಲಿ ಭಾರತ ಐದು ಪಂದ್ಯಗಳನ್ನು ಆಡಿದೆ. ಇದರಲ್ಲೂ ಕೂಡ ಭಾರತ ನಾಲ್ಕು ಬಾರಿ ಲಂಕಾ ತಂಡವನ್ನು ಮಣಿಸಿದೆ. ಒಂದು ಪಂದ್ಯವನ್ನು ಮಾತ್ರ ಸಿಂಹಳೀಯರು ಗೆದ್ದುಕೊಂಡಿದ್ದಾರೆ.
ಟೀಮ್ ಇಂಡಿಯಾ ಸಂಭವನೀಯ ತಂಡ – ಶಿಖರ್ ಧವನ್ (ನಾಯಕ) ಪೃಥ್ವಿ ಶಾ, ಸೂರ್ಯ ಕುಮಾರ್ ಯಾದವ್, ಸಂಜು ಸಾಮ್ಸನ್/ ಇಶಾನ್ ಕಿಶಾನ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್/ ಕುಲದೀಪ್ ಯಾದವ್
ಶ್ರೀಲಂಕಾ ಸಂಭವನೀಯ ತಂಡ – ಅವಿಷ್ಕಾ ಫರ್ನಾಂಡೊ, ಮಿನೊದ್ ಭಾನುಕಾ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಷ, ಚರಿತ್ ಅಸಲಾಂಕಾ, ವನಿಂದು ಹಸರಂಗ, ಧನಂಜಯ ಡಿ ಸಿಲ್ವಾ, ದಸುನ್ ಶನಾಕ (ನಾಯಕ), ಕಸುನ್ ರಜಿತಾ, ಚಾಮಿಕಾ ಕರುಣರತ್ನೆ, ಲಕ್ಷನ್ ಸಂದಕಾನ್, ದುಶ್ಮಂತಾ ಚಾಮೀರಾ.








