T-20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ Saaksha Tv
2022ರ ಟಿ-20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿರುವ ಈ ಟೂರ್ನಿ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಪಂದ್ಯಗಳು ನಡೆಯಲಿವೆ.
2020 ರಲ್ಲಿ ನಡೆಯಬೇಕಿದ್ದ ಈ ವಿಶ್ವಕಪ್ ಟೂರ್ನಿಯು ಕೊರೊನಾ ಕಾರಣದಿಂದ ಈ ವರ್ಷಕ್ಕೆ ಮುಂದೂಡಲಾಗಿತ್ತು. ಎರಡು ವರ್ಷಗಳ ತಡವಾಗಿ ನಡೆಯುತ್ತಿರುವ ಈ ವಿಶ್ವಕಪ್ ರೋಚಕತೆಯಿಂದ ಕೂಡಿರಲಿದೆ. ಈ ವಿಶ್ವಕಪ್ ನಲ್ಲಿ ಭಾರತ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ. ಮೆಲ್ಬರ್ನ್ ಅಂಗಣದಲ್ಲಿ ಅಕ್ಟೋಬರ್ 23ರಂದು ಪಂದ್ಯ ನಡೆಯಲಿದೆ. ಈ ವಿಶ್ವಕಪ್ ನಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿದ್ದು, ಅಡಿಲೇಡ್, ಬ್ರಸ್ಬೇನ್, ಜೀಲಾಂಗ್ ಹೋಬಾರ್ಟ್, ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿ ಕ್ರೀಡಾಂಗಣಗಳಲ್ಲಿ ನಡೆಯಲಿವೆ.
ಈ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಟೂರ್ನಿಯ 12 ತಂಡಗಳನ್ನು ಈಗಾಗಲೇ ನಿರ್ಧರಿಸಲಾಗಿದೆ. ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್ ಎಂಟರಲ್ಲಿವೆ. ನಮೀಬಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಮುಖ್ಯ ಸುತ್ತಿನ ಮೊದಲು ಅರ್ಹತಾ ಪಂದ್ಯಗಳನ್ನು ಆಡಲಿವೆ. ಉಳಿದ ನಾಲ್ಕು ತಂಡಗಳು ಕೂಡ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಲಿವೆ.
ಇಡೀ ಟೂರ್ನಿಯಲ್ಲಿ ಭಾರತ ಒಟ್ಟು ಐದು ಪಂದ್ಯಗಳನ್ನು ಆಡಲಿದೆ. ಭಾರತವು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ, ಅಕ್ಟೋಬರ್ 27 ರಂದು ಎರಡನೇ ಪಂದ್ಯ ಎ ಗುಂಪಿನ ರನ್ನರ್ ಅಪ್ ತಂಡದೊಂದಿಗೆ ನಡೆಯಲಿದೆ. ಮೂರನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್ 30, ನಂತರ ನಾಲ್ಕನೇ ಪಂದ್ಯ ನವೆಂಬರ್ 2 ರಂದು ಬಾಂಗ್ಲಾದೇಶ ಮತ್ತು ಐದನೇ ಪಂದ್ಯ ನವೆಂಬರ್ 6 ರಂದು ಬಿ ಗುಂಪಿನ ವಿಜೇತರೊಂದಿಗೆ ನಡೆಯಲಿದೆ.
ಇನ್ನೂ ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವಕಪ್ ಫೈನಲ್ ನಡೆಯಲಿದೆ. ಅದೇ ಸಮಯದಲ್ಲಿ, ಸೆಮಿಫೈನಲ್ ಪಂದ್ಯಗಳು ನವೆಂಬರ್ 9 ಮತ್ತು 10 ರಂದು ಸಿಡ್ನಿ ಕ್ರಿಕೆಟ್ ಮೈದಾನ ಮತ್ತು ಅಡಿಲೇಡ್ ಓವಲ್ನಲ್ಲಿ ನಡೆಯಲಿದೆ. ಫೆಬ್ರವರಿ 7 ರಿಂದ ವಿಶ್ವಕಪ್ ಪಂದ್ಯಗಳ ಟಿಕೆಟ್ಗಳ ಮಾರಾಟ ಪ್ರಾರಂಭವಾಗಲಿದೆ.









