ಮೈದಾನದಲ್ಲಿ ಆಡಲಿ.. ಬಿಡಲಿ.. ಸದಾ ಸುದ್ದಿಯಲ್ಲಿರುವ ಆಟಗಾರ. ಟೀಮ್ ಇಂಡಿಯಾದ ಮಾಜಿ ನಾಯಕ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳದೇ ಹಲವು ತಿಂಗಳುಗಳೇ ಕಳೆದಿದೆ. ಕಳೆದ ವಿಶ್ವಕಪ್ ನಂತರ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಮತ್ತೆ ಕ್ರಿಕೆಟ್ ಕಿಟ್ ಹಿಡಿದುಕೊಂಡು ಚೆನ್ನೈನ ಉರಿ ಬಿಸಿಲಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಹೌದು, ಧೋನಿ ಐಪಿಎಲ್ ಸಿದ್ಧತೆಯಲ್ಲಿದ್ದಾರೆ. ವಯಸ್ಸು 39 ಅದ್ರೂ ಕ್ರಿಕೆಟ್ ಆಟದ ಹಸಿವು ಮಾತ್ರ ಕಮ್ಮಿಯಾಗಿಲ್ಲ. ಬ್ಯಾಟಿಂಗ್ ಲಯ ಸ್ವಲ್ಪ ಕಳೆದುಕೊಂಡಿದ್ರೂ ವಿಕೆಟ್ ಹಿಂದುಗಡೆ ಮಿಂಚಿನಂತೆ ಕೀಪಿಂಗ್ ಮಾಡುವ ತಾಕತ್ತು ಧೋನಿಗಿದೆ. ಧೋನಿಯ ಸ್ಥಾನವನ್ನು ತುಂಬಲು ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ಹೀಗಾಗಿ ಧೋನಿ ಹೆಸರು ಮತ್ತೆ ಮತ್ತೆ ಕೇಳಿಬರುತ್ತಿದೆ.
ಇದೀಗ ಟೀಮ್ ಇಂಡಿಯಾದ ಹೊಸ ಆಯ್ಕೆ ಸಮಿತಿಗೆ ಮುಂಬರುವ ಟಿ-ಟ್ವೆಂಟಿ ವಿಶ್ವಕಪ್‍ಗೆ ತಂಡವನ್ನು ಆಯ್ಕೆ ಮಾಡುವ ಸವಾಲಿದೆ. ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಸುನೀಲ್ ಜೋಷಿ ತಂಡವನ್ನು ಆಯ್ಕೆ ಮಾಡುವಂತಹ ಮಹತ್ತರವಾದ ಜವಾಬ್ದಾರಿ ಇದೆ. ಅದೂ ಅಲ್ಲದೆ ಜೋಷಿ ಕೂಡ ಆಯ್ಕೆ ಸಮಿತಿಯ ಅಧ್ಯಕ್ಷರಾಗಲು ಪರೋಕ್ಷವಾಗಿ ಕಾರಣ ಧೋನಿಯವರೇ. ಯಾಕಂದ್ರೆ ಧೋನಿಯವರ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಜೋಷಿ ಸಮರ್ಪಕವಾಗಿ ಉತ್ತರ ನೀಡಿ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನವನ್ನು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಆದ್ರೆ ಧೋನಿಯ ಬಗ್ಗೆ ಏನು ಹೇಳಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ
ಇನ್ನೊಂದೆಡೆ ಧೋನಿ ಕೂಡ ತನ್ನ ನಿವೃತ್ತಿಯ ಬಗ್ಗೆ ಏನು ಹೇಳುತ್ತಿಲ್ಲ. ಸೈಲೆಂಟಾಗಿ ತಮ್ಮ ಪಾಡಿಗೆ ತಾವು ಇದ್ದಾರೆ. ಈ ನಡುವೆ ಐಪಿಎಲ್‍ಗೆ ಸಕತ್ತು ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ಈ ಬಾರಿಯ ಐಪಿಎಲ್ ಧೋನಿ ಪಾಲಿಗೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಬಹುಶಃ ತಮ್ಮ ಕೊನೆಯ ಐಪಿಎಲ್ ಪಂದ್ಯವಾದ್ರೂ ಆಗಬಹುದು. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಲೇಬೇಕಾಗಿದೆ.
ಅದು ಅಲ್ಲದೆ ಧೋನಿ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೆ ಮುಂದಿನ ಟಿ-ಟ್ವೆಂಟಿ ವಿಶ್ವಕಪ್‍ಗೆ ಆಯ್ಕೆಯಾಗುವ ಸಾಧ್ಯತೆಯೂ ಹೆಚ್ಚಿದೆ. ಈ ಮೂಲಕ ತಮ್ಮ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ಅರ್ಥಪೂರ್ಣ ವಿದಾಯ ಹೇಳುವ ಅವಕಾಶವನ್ನು ನೀಡಬಹುದು. ನಾಯಕನಾಗಿ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಗೆದ್ದಿರುವ ಧೋನಿ, ಟ್ವೆಂಟಿ ಟ್ವೆಂಟಿಯ ಟಿ-ಟ್ವೆಂಟಿ ವಿಶ್ವಕಪ್ ಅನ್ನು ಗೆದ್ದು ತನ್ನ ಜವಾಬ್ದಾರಿಯನ್ನು ಮುಗಿಸುವ ಯೋಚನೆಯಲ್ಲೂ ಇರಬಹುದು. ಯಾಕಂದ್ರೆ ಕ್ರಿಕೆಟ್ ವಿಚಾರದಲ್ಲಿ ಧೋನಿಯ ಮನಸ್ಸನ್ನು ಅರಿತುಕೊಳ್ಳುವುದು ಕಷ್ಟ. ಕ್ಷಣ ಮಾತ್ರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಧೋನಿಯ ನಿವೃತ್ತಿಯೂ ಅಷ್ಟೇ ಬ್ರೇಕಿಂಗ್ ನ್ಯೂಸ್ ಆಗಿರುತ್ತೆ.








