ಐಪಿಎಲ್ ಪಂದ್ಯಗಳು ರಾಜ್ಯ ರಾಜಧಾನಿಯಲ್ಲಿ ನಡೆಯುವ ದಿನದಂದು ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಅನುಕೂಲವಾಗಲಿ ಎಂಬ ಉದ್ಧೇಶದಿಂದ ನಮ್ಮ ಮೆಟ್ರೋ ಸೇವೆಯನ್ನು ತಡರಾತ್ರಿಯವರೆಗೂ ವಿಸ್ತರಿಸಲಾಗಿದೆ.
ಲೀಗ್ ಹಂತದ 5 ಪಂದ್ಯಾವಳಿಗಳು ಏಪ್ರಿಲ್ 10, 17, 26 ಮತ್ತು ಮೇ 21 ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾತ್ರಿ 11 ಗಂಟೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೆಚ್ಚುವರಿ ಬಸ್ ಸೌಲಭ್ಯವನ್ನು ನಗರದ ವಿವಿಧ ಬಾಗಗಳಿಗೆ ಒದಗಿಸಲಾಗುತ್ತದೆ. ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕೆಂಗೇರಿ ಕೆಎಚ್ಬಿ ಕ್ವಾರ್ಟರ್ಸ್, ನೆಲಮಂಗಲ, ಯಲಹಂಕ 5ನೇ ಹಂತ, ಆರ್.ಕೆ.ಹೆಗಡೆ ನಗರ, ಬಾಗಲೂರು, ಹೊಸಕೋಟೆ ಕಡೆಗೆ ಚಿನ್ನಸ್ವಾಮಿ ಮೈದಾನದಿಂದ ಬಸ್‌ಗಳು ಇರಲಿವೆ ಎಂದು ಬಿಎಂಟಿಸಿ ಹೇಳಿದೆ.
ಬಿಎಂಟಿಸಿ ಬಸ್‌ಗಳು ಎಚ್ಎಎಲ್ ರಸ್ತೆ, ಹೂಡಿ, ಅಗರ ದೊಮ್ಮಸಂದ್ರ, ಹೊಸೂರು ರಸ್ತೆ, ಜಯದೇವ ಆಸ್ಪತ್ರೆ, ನಾಯಂಡನಹಳ್ಳಿ, ಮಾಗಡಿ ರಸ್ತೆ, ಯಶವಂತಪುರ, ಹೆಬ್ಬಾಳ, ನಾಗವಾರ, ಟ್ಯಾನರಿ ರಸ್ತೆ, ಹೆಣ್ಣೂರು ರಸ್ತೆ, ಟಿನ್ ಫ್ಯಾಕ್ಟರಿ ಮಾರ್ಗವಾಗಿ ಸಂಚರಿಸಲಿವೆ ಎಂದು ಬಿಎಂಟಿಸಿ ಸಂಸ್ಥೆ ಮಾಹಿತಿ ನೀಡಿದೆ.
ಬೈಯಪ್ಪನಹಳ್ಳಿ – ಕೆಂಗೇರಿ ಮತ್ತು ನಾಗಸಂದ್ರ – ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ರೈಲು ಸೇವೆಗಳನ್ನು 1 ಗಂಟೆಯವರೆಗೆ ವಿಸ್ತರಿಸಲಾಗುವುದು. ಇದೇ ವೇಳೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕೊನೆಯ ರೈಲು ಮಧ್ಯರಾತ್ರಿ 1.30ಕ್ಕೆ ಹೊರಡಲಿದೆ. ನಗರದಲ್ಲಿ ಪಾರ್ಕಿಂಗ್ ಸಮಸ್ಯೆಗಳು ಮತ್ತು ಪ್ರಮುಖ ಅವಧಿಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೆಟ್ರೋ ಮೂಲಕ ಪ್ರಯಾಣಿಸುವವರಿಗೆ ಅವಧೀ ವಿಸ್ತರಣೆಯು ನೆರವಾಗಲಿದೆ.
ಎಂ ಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಹತ್ತಲು ಮತ್ತು ಇಳಿಯುವವರಿಗೆ, ಆರ್‌ಸಿಬಿ ಪಂದ್ಯಗಳಿರುವ ದಿನಗಳಲ್ಲಿ ಕಾಗದದ ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಬಿಎಂಆರ್‌ಸಿಎಲ್ ಘೋಷಿಸಿದೆ. “ಈ ಕಾಗದದ ಟಿಕೆಟ್‌ಗಳ ಬೆಲೆ 50 ರೂಪಾಯಿ. ಕ್ರಿಕೆಟ್ ಪಂದ್ಯಗಳ ದಿನದಂದು ರಾತ್ರಿ 8.00ರಿಂದ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ – ಕೆಂಗೇರಿ ಮತ್ತು ನಾಗಸಂದ್ರ – ಸಿಲ್ಕ್ ಇನ್‌ಸ್ಟಿಟ್ಯೂಟ್ ವಿಭಾಗಗಳಲ್ಲಿನ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಏಕಮುಖ ಪ್ರಯಾಣಕ್ಕೆ ಮಾನ್ಯವಾಗಿರುತ್ತದೆ,” ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.