ಐಸಿಸಿ ಸಭೆಯಲ್ಲಿ ನಿರ್ಧಾರವಾಗಿಲ್ಲ ಟಿ-ಟ್ವೆಂಟಿ ವಿಶ್ವಕಪ್ ಭವಿಷ್ಯ
ಕೊರೋನಾ ವೈರಸ್ ಹಾವಳಿಯಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ನಿನ್ನೆ ನಡೆದ ಐಸಿಸಿ ಸಭೆಯಲ್ಲಿ ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಮುಖ್ಯವಾಗಿ 2020ರ ವಿಶ್ವಕಪ್ ಟೂರ್ನಿಯ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ.
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಮತ್ತು ನವಂಬರ್ ನಲ್ಲಿ ಟಿ-ಟ್ವಂಟಿ ಟೂರ್ನಿಯ ವೇಳಾಪಟ್ಟಿ ಸೇರಿದಂತೆ ಟೂರ್ನಿಯನ್ನು ನಡೆಸಲು ಪ್ಲಾನ್ ಮಾಡಲಾಗಿತ್ತು. ಆದ್ರೆ ಕೊರೋನಾ ವೈರಸ್ ಪ್ರತಿಷ್ಠಿತ ಟೂರ್ನಿಗೆ ಅಡ್ಡಿಯನ್ನುಂಟು ಮಾಡಿದೆ. ನಿನ್ನೆಯ ಸಭೆ ಸೇರಿದಂತೆ ಎರಡು ಬಾರಿ ಐಸಿಸಿ ಸಭೆ ನಡೆಸಲಾಗಿತ್ತು. ಆದ್ರೆ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಕೇವಿನ್ ರಾಬಟ್ರ್ಸ್ ಅವರು, ಅಕ್ಟೋಬರ್ -ನವೆಂಬರ್ ನಲ್ಲಿ ಟೂರ್ನಿಯನ್ನು ನಡೆಸುವುದು ತುಂಬಾನೇ ರಿಸ್ಕ್ ಎಂದು ಹೇಳಿದ್ದಾರೆ.
ವಿಶ್ವದೆಲ್ಲೆಡೆ ಕೊರೋನಾ ವೈರಸ್‍ನಿಂದಾಗಿ ಪರಿಸ್ಥಿತಿ
ಅಷ್ಟೊಂದು ಚೆನ್ನಾಗಿಲ್ಲ. ಹೀಗಾಗಿಯೂ ಟೂರ್ನಿಯನ್ನು ಸಂಘಟಿಸಲು ನಾವು ಅವಕಾಶಕ್ಕಾಗಿ ಕಾಯುತ್ತಿದ್ದೇವೆ. ಆದ್ರೆ ನಮಗೆ ಎಲ್ಲರಿಗೂ ಆರೋಗ್ಯ ಮುಖ್ಯ. ಆರೋಗ್ಯದ ಕಡೆಗೂ ಗಮನ ಹರಿಸಬೇಕಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತೇವೆ ಎಂದು ಐಸಿಸಿ ಸಿಇಒ ಮನು ಸ್ವಾಹ್ನೆ ಹೇಳಿದ್ದಾರೆ.
ಐಸಿಸಿ ಸಭೆಯಲ್ಲಿ 16 ಕ್ರಿಕೆಟ್ ಮಂಡಳಿಗಳ ಸದಸ್ಯರು ಭಾಗಿಯಾಗಿದ್ದರು. ಸುಮಾರು ಆರು ಗಂಟೆಗಳ ಕಾಲ ಚರ್ಚೆ ನಡೆಸಲಾಗಿತ್ತು. ಅಲ್ಲದೆ ಮುಂದಿನ ತೀರ್ಮಾನವನ್ನು ಜುಲೈನಲ್ಲಿ ಪ್ರಕಟಿಸಲಾಗುವುದು ಎಂದು ಐಸಿಸಿ ಸಭೆಯಲ್ಲಿ ನಿರ್ಧಾರವಾಗಿದೆ.
ಒಂದು ವೇಳೆ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಮುಂದೂಡಿದ್ರೆ ಆಸ್ಟ್ರೇಲಿಯಾ 2021ರ ಆತಿಥ್ಯ ವಹಿಸಬೇಕಾಗುತ್ತೆ. ಆದ್ರೆ 2021ಕ್ಕೆ ಭಾರತ ಆತಿಥ್ಯ ವಹಿಸಲಿದೆ. ಹೀಗಾಗಿ ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರವನ್ನು ಬಿಸಿಸಿಐ ಒಪ್ಪಿಕೊಳ್ಳುವುದು ಅಸಾಧ್ಯವಾಗಿದೆ.
ಇನ್ನು ಸಭೆಯಲ್ಲಿ ಐಸಿಸಿ ನೂತನ ಅಧ್ಯಕ್ಷರ ಆಯ್ಕೆಯ ಬಗ್ಗೆಯೂ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ. ಒಟ್ಟಿನಲ್ಲಿ ಐಸಿಸಿಗೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸಂಘಟಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.








