t20 world cup 2022 – ಸೌತ್ ಆಫ್ರಿಕಾ ಬೆಂಕಿ ಬೌಲಿಂಗ್.. 133 ರನ್ ಗಳಿಗೆ ಭಾರತ ಸುಸ್ತು
ಟಿ 20 ವಿಶ್ವಕಪ್ ನ ಭಾಗವಾಗಿ ಪರ್ಥ್ ನಲ್ಲಿ ನಡೆಯುತ್ತಿರುವ ದಕ್ಷಿಣಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸಾಧಾರಣ ಮೊತ್ತ ಕಲೆಹಾಕಿದೆ.
ಸೂರ್ಯ ಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ.
ಆ ಮೂಲಕ ಪಂದ್ಯ ಗೆಲ್ಲಲು ಸೌತ್ ಆಫ್ರಿಕಾಗೆ 134 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಪವರ್ ಪ್ಲೇನಲ್ಲಿ ಆರಂಭಿಕರನ್ನು ಕಳೆದುಕೊಳ್ತು. ಎನ್ಗಿಡಿಯ ಮೊದಲ ಔವರ್ ನಲ್ಲಿಯೇ ಆರಂಭಿಕರಾದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಪೆವಿಲಿಯನ್ ಸೇರಿಕೊಂಡರು.
14 ಎಸೆತಗಳಲ್ಲಿ ಎದುರಿಸಿದ ಕೆ.ಎಲ್.ರಾಹುಲ್ ಒಂದು ಸಿಕ್ಸ್ ನೊಂದಿಗೆ 9 ರನ್ ಗಳಿಗೆ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟ್ ನಿರಾಸೆ ಮೂಡಿಸಿದರು.
ಈ ಟೂರ್ನಿಯಲ್ಲಿ ರಾಹುಲ್ ಗೆ ಇದು ಸತತ ಮೂರನೇ ವೈಫಲ್ಯವಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 14 ಎಸೆತಗಳಿಗೆ 15 ರನ್ ಗಳಿಸಿ ಔಟಾದರು.
ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ 11 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಿಡಿಸಿ 12 ರನ್ ಗಳಿಗೆ ಔಟ್ ಆಗಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಅವಕಾಶ ಪಡೆದ ದೀಪಕ್ ಹೂಡ ಶೂನ್ಯಕ್ಕೆ ಔಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಪೆವಿಲಿಯನ್ ಸೇರಿಕೊಂಡರು.
ಈ ಹಂತದಲ್ಲಿ ಸೂರ್ಯ ಕುಮಾರ್ ಯಾದವ್ ಮತ್ತು ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ಚೇತರಿಕೆ ನೀಡಿದರು. ಈ ಜೋಡಿ ಆರನೇ ವಿಕೆಟ್ ಗೆ ಅರ್ಧಶತಕದ ಜೊತೆಯಾಟವನ್ನು ನೀಡಿತು.
ಈ ಹಂತದಲ್ಲಿ 6 ರನ್ ಗಳಿಸಿದ್ದ ದಿನೇಶ್ ಕಾರ್ತಿಕ್ ಎನ್ಗಿಡಿಗೆ ವಿಕೆಟ್ ಒಪ್ಪಿಸಿದರು. ಅಲ್ಲಿಂದ ಭಾರತೀಯ ಬಾಲಂಗೋಚಿಗಳ ಪೆವಿಲಿಯನ್ ಪರೇಡ್ ಶುರುವಾಯಿತು.
ಒಂದು ಕಡೆ ವಿಕೆಟ್ ಗಳು ಬೀಳುತ್ತಿದ್ದರೂ ಎಂದಿನಂತೆ ಬ್ಯಾಟ್ ಬೀಸಿದ ಸೂರ್ಯ ಕುಮಾರ್ ಯಾದವ್, 40 ಎಸೆತಗಳಲ್ಲಿ ಆರು ಬೌಂಡರಿ, ಮೂರು ಸಿಕ್ಸರ್ ಗಳ ನೆರವಿನಿಂದ 68 ರನ್ ಗಳಿಸಿ ಔಟ್ ಆದರು.
ಉಳಿದಂತೆ ಅಶ್ವಿನ್ ಏಳು ರನ್, ಭುವಿ ನಾಲ್ಕು, ಅರ್ಷ್ ದೀಪ್ 2 ರನ್ ಗಳಿಸಿದರು.
ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ. ದಕ್ಷಿಣಾಫ್ರಿಕಾ ಪರ ಲುಂಗಿ ನಾಲ್ಕು, ಪರ್ನೆಲ್ ಮೂರು, ಅನ್ರಿಚ್ ನಾರ್ಟ್ಜೆ ಒಂದು ವಿಕೆಟ್ ಪಡೆದರು.