T20 Worldcup: ವಿಶ್ವಕಪ್ ಟೂರ್ನಿಯಿಂದ ಜಸ್ಪ್ರೀತ್ ಬುಮ್ರಾ ಔಟ್…
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಬೆನ್ನುನೋವಿನಿಂದಾಗಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನ ಬಿಸಿಸಿಐ ಖಚಿತಪಡಿಸಿದೆ.
ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, 4 ರಿಂದ 6 ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎನ್ನಲಾಗಿದೆ. ಹಾಗಾಗಿ ಬುಮ್ರಾ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲೂ ಅವರು ತಂಡದ ಭಾಗವಾಗಿರಲಿಲ್ಲ. ಅಭ್ಯಾಸದ ವೇಳೆ ಬೆನ್ನು ನೋವಿನಿಂದ ಬಳಲುತ್ತಿದ್ದರು. ನಂತರ ವೈದ್ಯಕೀಯ ತಂಡದ ಆದೇಶದ ಮೇರೆಗೆ ಮೊದಲ ಟಿ20 ಪಂದ್ಯದಿಂದ ಕೈಬಿಡಲಾಗಿತ್ತು.
ಜಸ್ಪ್ರೀತ್ ಬುಮ್ರಾ ಇಡೀ ಏಷ್ಯಾಕಪ್‌ನಿಂದ ಹೊರಗುಳಿದಿದ್ದರು. ಇದರ ನಂತರ, ಅವರು ಆಸ್ಟ್ರೇಲಿಯಾ ವಿರುದ್ಧ ಆಡಿದ ಮೂರು ಪಂದ್ಯಗಳ T20 ಸರಣಿಯಲ್ಲಿ ಪುನರಾಗಮನ ಮಾಡಿದರು. ಇಲ್ಲಿಯೂ ಮೊದಲ ಪಂದ್ಯ ಆಡಲು ಸಾಧ್ಯವಾಗಿರಲಿಲ್ಲ. ಎರಡನೇ ಪಂದ್ಯದಲ್ಲಿ ಅವಕಾಶ ಪಡೆದು ಅದ್ಭುತ ಬೌಲಿಂಗ್ ಮಾಡಿದ್ದರು.
ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಿದಾಗಿನಿಂದ ಟೀಮ್ ಇಂಡಿಯಾದ ಒಂದಲ್ಲ ಒಂದು ತೊಂದರೇ ಹೆಚ್ಚಾಗುತ್ತಲೇ ಇವೆ. ಮೊದಲಿಗೆ ರವೀಂದ್ರ ಜಡೇಜಾ ಗಾಯದ ಕಾರಣ ವಿಶ್ವಕಪ್‌ನಿಂದ ಹೊರಗುಳಿದಿದ್ದರು. ನಂತರ ದೀಪಕ್ ಹೂಡಾ ಕೂಡ ಇತ್ತೀಚೆಗೆ ಗಾಯಗೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಿಂದ ಹೊರಗುಳಿದಿದ್ದರು. ಇದೀಗ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಿಂದ ವಿಶ್ವಕಪ್‌ನಲ್ಲಿ ಭಾರತದ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ.
ಏಷ್ಯಾಕಪ್‌ನಿಂದಲೇ ಡೆತ್ ಓವರ್‌ಗಳಲ್ಲಿ ತಂಡ ಅತ್ಯಂತ ಕಳಪೆ ಬೌಲಿಂಗ್ ಮಾಡುತ್ತಿದೆ. ತಂಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ 18 ಮತ್ತು 19ನೇ ಓವರ್‌ಗಳಲ್ಲಿ ದುಬಾರಿ ಎನಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬುಮ್ರಾ ಆಗಮನದಿಂದ ತಂಡದ ಈ ಸಮಸ್ಯೆಗೆ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಗಾಯದ ಸಮಸ್ಯೆಯಿಂದ ಈ ಸ್ಟಾರ್ ಆಟಗಾರ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
T20 World Cup | Bumrah Ruled Out Of India T20 WC Squad Jasprit Bumrah








