ತಲಕಾವೇರಿ ನಾರಾಯಣಾಚಾರ್ ಅವರನ್ನು ಊರಿನ ಹೆಚ್ಚಿನ ಜನರಂತೆ ನಾನು “ಸ್ವಾಮಿ” ಎಂದು ಕರೆಯುತ್ತಿದ್ದೆ. ನಾನು ಚಿಕ್ಕವನಿದ್ದಾಗ ಸ್ವಾಮಿಗಳು ಭಾಗಮಂಡಲ ಸಂತೆಯಲ್ಲಿ ಸಿಕ್ಕಿದರೂ ನನ್ನ ಅಮ್ಮ ಅವರ ಚರಣ ಸ್ಪರ್ಶ ಮಾಡಿಸುತ್ತಿದ್ದರು. ತಲಕಾವೇರಿಗೆ ಹೋದಾಗ ಸ್ವಾಮಿಗಳನ್ನು ಕಾಣದೇ ಬಂದರೆ ಆ ಪಯಣ ಅಪೂರ್ಣವೆನಿಸುತ್ತಿತ್ತು. 2016ರ ನಂತರ ನನ್ನದು ಅವರ ಜೊತೆ ನಿಕಟ ಸಂಪರ್ಕ. ಅನೇಕ ಸಭೆಗಳಲ್ಲಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದೆ. ವಯಸ್ಸಿನಲ್ಲಿ ಬಹಳ ಹಿರಿಯರಿದ್ದರೂ ಕಳೆದ ಕೆಲವು ವರ್ಷಗಳಿಂದ ನಾವು ಸ್ನೇಹಿತರಂತೆ ಹರಟುತ್ತಿದ್ದೆವು.
ಸ್ವಾಮಿಗಳ ಕೈಯಾಡಿಸದ ಕೃಷಿಯಿಲ್ಲದ ಕಾರಣ ನಮ್ಮ ಹೆಚ್ಚಿನ ಮಾತುಕತೆ ಕೃಷಿಯ ಕುರಿತಾಗಿ ಇರುತ್ತಿತ್ತು. ಬಹಳ ಬಾರಿ ಅವರ ಪೋನು ನೆಟ್ವರ್ಕ್ ವ್ಯಾಪ್ತಿಯಿಂದ ಹೊರಗಿರುವುದರಿಂದ ಆಗಸ್ಟ್ ಐದರಂದು ಕೂಡ ಅವರ ಜೊತೆ ಮಾಡನಾಡಲು ಸಾಧ್ಯವಾಗದಿದ್ದಾಗ ಈ ದುರಂತದ ಸುಳಿವು ನನಗಿರಲಿಲ್ಲ. ನಮ್ಮ ಊರಿನಲ್ಲಿ ಹೆಚ್ಚಿನವರ ಪೋನ್ ಕವರೇಜ್ ಏರಿಯಾದಿಂದ ಹೊರಗಿರುವುದು ಸಾಮಾನ್ಯ.
ಸ್ವಾಮಿಗಳು ಪ್ರತಿ ಸೋಮವಾರ ಭಾಗಮಂಡಲದ ಸಂತೆಯಲ್ಲಿ ನಿಂತು ಅಂತರಾಷ್ಟ್ರೀಯ, ರಾಷ್ಟ್ರೀಯ ವಿಷಯಗಳನ್ನು ಅರೆಭಾಷೆಯಲ್ಲಿ ಸರಳೀಕರಿಸಿ ಜನಸಾಮಾನ್ಯರಿಗೆ ಹೇಳುತ್ತಿದ್ದರು. ಅವರ ಮಾತುಗಳಲ್ಲಿ ಅದೇನೋ ಶಕ್ತಿಯಿತ್ತು. ನಾರಾಯಣಾಚಾರ್ ಸ್ವಾಮಿಗಳು ಭಾಗಮಂಡಲದ ಹೋಬಳಿಯಲ್ಲಿ ಅಲಂಕರಿಸದ ಸ್ಥಾನವಿಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷರ ಸ್ಥಾನದಿಂದ ಹಿಡಿದು ಹನಿಸೊಸೈಟಿ , ಕಾವೇರಿ ಜುನಿಯರ್ ಕಾಲೇಜು, ಸಹಕಾರಿ ಸಂಸ್ಥೆಗಳ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಅವರ ವಾಕ್ ಚಾತುರ್ಯಕ್ಕೆ ಮಾರು ಹೋಗದವರಿಲ್ಲ, ಅವರ ಭಾಷಣವಿದ್ದರೆ ಅಲ್ಲಿ ಬೇರೆ ನಾಯಕರು/ ಭಾಷಣಕಾರರು ಟುಸ್ಸಾಗುವುದನ್ನು ನಾವು ಅನೇಕ ಬಾರಿ ನೋಡಿದ್ದವು.
ನಾರಾಯಣಾಚಾರ್ ಅವರಿಗಿದ್ದ ದೇವಸ್ಥಾನದ ಪ್ರಧಾನ ಅರ್ಚಕನ ಸ್ಥಾನ ಅವರಿಗೆ ಹುಟ್ಟಿನಿಂದ ಆಕಸ್ಮಿಕವಾಗಿ ಬಂದಿರಬಹುದು ಆದರೆ ಅವರಲ್ಲಿ ಅದನ್ನು ಮೀರಿದ ಅಗಾಧವಾದ ಪಾಂಡಿತ್ಯ ,ವಾಕ್ ಚಾತುರ್ಯ, ಅದ್ಭುತ ವೈಜ್ಞಾನಿಕ ಮತ್ತು ರಾಜಕೀಯ ಪ್ರಜ್ಞೆಯಿತ್ತು. ಅದಕ್ಕಾಗಿ ಅವರನ್ನು ಪಕ್ಷಾತೀತವಾಗಿ ಜನರು ಗೌರವಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅವರು ವಯಸ್ಸು ಎಂಬತ್ತರ ಹತ್ತಿರವಿದ್ದರೂ ಅವರ ವಿಚಾರಗಳು ಅಪ್ರಸ್ತುತವಾಗಿರಲಿಲ್ಲ.
ಗುಸುಗುಸು ಮಾತುಗಳು ಎಲ್ಲಾ ಊರಿನಲ್ಲಿ ಎಲ್ಲರ ಬಗ್ಗೆ ಇರುತ್ತದೆ. ಅವರು ಸತ್ತ ಮೇಲೆ ಅವರನ್ನು ಅವರಿಗೆ ಡಿಫೆಂಡ್ ಮಾಡಲು ಆಗದಾಗ ಬಂದು ಆಳಿಗೊಂದು ಕಲ್ಲೆಸೆಯುವವರಿಗೆ ಅವರು ಬದುಕಿದ್ದಾಗ ಕೆಮ್ಮುವ ಧೈರ್ಯವಿರಲಿಲ್ಲ. ಹಾಗೆಂದ ಮಾತ್ರಕ್ಕೆ ಸ್ವಾಮಿಗಳು ಪರಿಪೂರ್ಣ ಸಂತರಲ್ಲವೆಂಬುದು ಊರಿಗೆಲ್ಲ ಗೊತ್ತಿತ್ತು. ಪ್ರತಿ ಬಾರಿ ಅವರ ಕಾಲಿಗೆ ಬೀಳುತ್ತಿದ್ದ ನನಗೂ ಸೇರಿ. ಆದರೆ ಅವರಲ್ಲಿದ್ದ ಒಳ್ಳೆಯ ಗುಣಗಳನ್ನು ಪಟ್ಟಿ ಮಾಡಿದರೆ ಅದು ಹತ್ತು ಪಟ್ಟು ಜಾಸ್ತಿ ತೂಗುತ್ತಿತ್ತು. ಅವರ ಆಸ್ತಿ ಪಾಸ್ತಿ ಎಷ್ಟೇ ಇರಲಿ ಅದು ಯಾವುದೂ ಇನ್ನೊಬ್ಬರ ತಲೆ ಮೇಲೆ ಹೊಡೆದು ಕಟ್ಟಿದ ಸಾಮ್ರಾಜ್ಯವಲ್ಲ ಎಂಬುದನ್ನು ಊರಿನ ಜನರು ಒಪ್ಪಿದ್ದ ಕಾರಣ ಅವರಿಗೆ ಕೊಡುವ ಗೌರವ ಮೊದಲಿನಷ್ಟೆ ಇತ್ತು. ಸ್ವಾಮಿಗಳ ದೇಹವನ್ನು ಹುಡುಕಲೇ ಬೇಕೆಂಬ ಹಠದಿಂದ, ಆ ಚಳಿಮಳೆಯಲ್ಲಿ ಅಲ್ಲಿ ಸೇರುತ್ತಿದ್ದ ಜನಸಾಗರ ಊರಿನವರಿಗೆ ಸ್ವಾಮಿಗಳ ಮೇಲಿದ್ದ ಅಭಿಮಾನದ ಸಂಕೇತ.
ಜನರಿಗೆ ಇನ್ನೊಬ್ಬರ ಖಾಸಗಿ ಬದುಕಿನ ಮೇಲೆ ಅದೇನೋ ಕುತೂಹಲ. ಸ್ವಾಮಿಗಳ ಹೆಣ್ಣು ಮಕ್ಕಳು ಅಂತರಧರ್ಮೀಯ ವಿವಾಹವಾದದ್ದು ಕೂಡ ನಮಗೆಲ್ಲ ಗೊತ್ತಿರುವ ವಿಷಯ. ಅದು ಮಕ್ಕಳ ವೈಯುಕ್ತಿಕ ವಿಚಾರವೆಂಬ ಕಾರಣಕ್ಕೆ ಮತ್ತು ಸ್ವಾಮಿಗಳ ವ್ಯಕ್ತಿತ್ವ ಇದೆಲ್ಲದಕ್ಕಿಂತ ಜಾಸ್ತಿ ತೂಗುತ್ತಿದ್ದ ಕಾರಣಕ್ಕಾಗಿ ನಾವು ಅವರಿಗೆ ಆಗಿರಬಹುದಾದ ನೋವುಗಳ ಕುರಿತು ಮರುಗುತ್ತಿದ್ದೆವು. ತಮ್ಮ ವೈಯುಕ್ತಿಕ ನೋವುಗಳನ್ನು ವಿಷಕಂಠನಂತೆ ನುಂಗಿಕೊಂಡು ಸಾರ್ವಜನಿಕವಾಗಿ ಅವರು ಬಹಳ ಗಟ್ಟಿ ಮನಸ್ಸಿನಿಂದ ಕೆಲಸ ಮಾಡುತ್ತಿದ್ದವರು.
“ನೀವು ನಮ್ಮ ಜಿಲ್ಲೆಗೆ ಬನ್ನಿ ಡಾಕ್ಟರೆ.. ಇಲ್ಲಿ ಕೆಲಸ ಮಾಡಿ ” ಎಂದು ಅನೇಕ ಬಾರಿ ಅವರು ನನಗೆ ನೆನಪಿಸುತ್ತಿದ್ದರು. ನಾನು ಬರುವ ವಿಚಾರ ಅವರಿಗೆ ತಿಳಿಸಿದ್ದರೆ ಬಹಳ ಸಂತೋಷ ಪಡುತ್ತಿದ್ದರು ಆದರೆ ಆ ಭಾಗ್ಯ ನನಗಿಲ್ಲ. ನಾನು ಬಂದಾಗಿದೆ ಆದರೆ ಇಂದು ಜೊತೆಗೆ ಅವರಿಲ್ಲ..
ಭಾಗಮಂಡಲದಲ್ಲಿ ಅವರ ಮೃತದೇಹವನ್ನು ನೋಡುವ ಮನಸ್ಸಿಲ್ಲದಿದ್ದರೂ ಆಸ್ಪತ್ರೆಗೆ ಒಂದು ಸುತ್ತು ಹಾಕಿದೆ. ಅವರ ನಗು ಮುಖ ಮತ್ತು ಮಾತುಗಳು ನನ್ನ ನೆನಪಿನಂಗಳದಲ್ಲಿ ಶಾಶ್ವತವಾಗಿ ಉಳಿಯಲಿವೆ. ಸ್ವಾಮಿಗಳ ಸಾವಿನಿಂದ ನನಗೆ ವೈಯುಕ್ತಿಕವಾಗಿ ಅಪಾರ ನಷ್ಟವಾಗಿದೆಯೆಂದು ಅವರ ಹೆಣ್ಣುಮಕ್ಕಳ ಜೊತೆ ಮಾತನಾಡುವಾಗ ನುಡಿದೆ. ಅವರು ಆರೋಗ್ಯವಾಗಿದ್ದ ಕಾರಣ ಇನ್ನು ಹತ್ತಾರು ವರ್ಷಗಳ ಕಾಲ ಜೊತೆಯಲ್ಲಿ ನಮ್ಮ ಮಾರ್ಗದರ್ಶಕರಾಗಿರುತ್ತಿದ್ದರೆ ನಮಗೆಲ್ಲ ಆನೆಬಲವಿರುತ್ತಿತ್ತು. ಸ್ವಾಮಿಗಳ ಪಿತ್ರಾರ್ಜಿತ ಮತ್ತು ಇತರ ಎಲ್ಲಾ ಆಸ್ತಿಗಳನ್ನು ಪಟ್ಟಿ ಮಾಡುವವರು ಸ್ವತಃ ಸ್ವಾಮಿಗಳು ನಮಗೆಲ್ಲಾ ಆಸ್ತಿಯಾಗಿದ್ದರು ಎಂಬ ವಿಷಯವನ್ನು ಪಟ್ಟಿ ಮಾಡಲಿಲ್ಲ. ಸ್ವಾಮಿಗಳು ಮತ್ತೆ ಹುಟ್ಟಿ ಬರಲಿ !!!!
-ಡಾ ಕುಶ್ವಂತ್ ಕೋಳಿಬೈಲು
ವೈದ್ಯರು ಹಾಗೂ ಹವ್ಯಾಸಿ ಬರಹಗಾರರು
ಮಡಿಕೇರಿ








