ಹೊಸದಿಲ್ಲಿ, ಜೂನ್.06 : ಭಾರತ-ಚೀನಾ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಇಂದು ನಡೆದ ಎರಡೂ ರಾಷ್ಟ್ರಗಳ ಹಿರಿಯ ಕಮಾಂಡರ್ ಗಳ ಮಾತುಕತೆಯ ಮಾಹಿತಿಯನ್ನು ನೀಡಲು ಭಾರತೀಯ ಸೇನಾ ವಕ್ತಾರರು ನಿರಾಕರಿಸಿದ್ದಾರೆ.
ಭಾರತ-ಚೀನಾ ಸೇನೆಯ ಲೆಫ್ಟಿನೆಂಟ್ ಜನರಲ್ಗಳು ನಡೆಸಿದ ರಾಜತಾಂತ್ರಿಕ ಮಾತುಕತೆಯ ಬಗ್ಗೆ ಯಾವುದೇ ರೀತಿಯ ಸುದ್ದಿಗೋಷ್ಠಿ ನಡೆಸುವುದಿಲ್ಲ ಹಾಗೂ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡುದಿಲ್ಲ ಎಂದು ಭಾರತೀಯ ಸೇನಾ ವಕ್ತಾರರು ತಿಳಿಸಿದ್ದಾರೆ.
ಪ್ರಸ್ತುತ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ತಲೆದೋರಿರುವ ಸಂಘರ್ಷದ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಹಿರಿಯ ಅಧಿಕಾರಿಗಳು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ.
ಎರಡು ರಾಷ್ಟ್ರಗಳ ನಡುವೆ ಈಗಿರುವ ಪರಿಸ್ಥಿತಿಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ತುರ್ತು ಅಗತ್ಯವಿರುವ ಕಾರಣ ಇಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೇ ರೀತಿಯ ಮಾಹಿತಿ ಬಹಿರಂಗ ಮಾಡಲು ಸಾಧ್ಯವಿಲ್ಲ. ಮಾಧ್ಯಮಗಳು ಕೂಡ ಊಹಾಪೋಹಗಳಿಂದ ಅಂತರ ಕಾಪಾಡಿಕೊಳ್ಳುವಂತೆ ಭಾರತೀಯ ಸೇನಾ ವಕ್ತಾರರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಲಡಾಖ್ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಭಾರತ ಚೀನಾ ಕಮಾಂಡರ್ಸ್ ಮೀಟಿಂಗ್ ನಡೆದಿದ್ದು ಚೀನಾದ ದಕ್ಷಿಣ ಕ್ಸಿನ್ ಜಿಯಾಂಗ್ ಜಿಲ್ಲೆಯ ಕಮಾಂಡರ್ ಆಗಿರುವ ಮೇಜರ್ ಜನರಲ್ ಲಿಯು ಲಿನ್ ಅವರು ಭಾರತದ ಕಾರ್ಪ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವದ ನಿಯೋಗದ ಜೊತೆ ಶಾಂತಿ ಮಾತುಕತೆ ನಡೆಸಿದರು.








