ಕೊರೋನಾ ಸೋಂಕಿಗೆ ತಮಿಳುನಾಡಿನ ಹಿರಿಯ ಶಾಸಕ ಅನ್ಬಳಗನ್ ಬಲಿ

ಚೆನ್ನೈ, ಜೂನ್ 10: ತಮಿಳುನಾಡಿನ ವಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ನ ಹಿರಿಯ ಶಾಸಕ ಜೆ ಅನ್ಬಳಗನ್ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ . ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 61 ವರ್ಷದ ಅನ್ಬಳಗನ್ ಅವರ ಆರೋಗ್ಯ ಸ್ಥಿತಿ ಸೋಮವಾರ ಸಂಜೆಯಿಂದ ಗಂಭೀರವಾಗಿತ್ತು. ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಡಾ. ರೆಲಾ ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಕೊರೋನಾ ವೈರಸ್ ಸೋಂಕಿನಿಂದ ರಕ್ತದೊತ್ತಡ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಆಮ್ಲಜನಕದ ಪ್ರಮಾಣ ಅರ್ಧಕ್ಕೆ ಕುಸಿದಿತ್ತು ಹಾಗೂ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ ಎಂದು ಡಾ. ರೆಲಾ ಸಂಸ್ಥೆ ಮತ್ತು ವೈದ್ಯಕೀಯ ಕೇಂದ್ರ ತಿಳಿಸಿದೆ.
ಅನ್ಬಳಗನ್ ಕೊರೋನಾ ಸೋಂಕಿನ ಜೊತೆಗೆ ಕಿಡ್ನಿ ಸಮಸ್ಯೆಯಿಂದ ಕೂಡಾ ಬಳಲುತ್ತಿದ್ದರು. ಗಂಭೀರ ಪರಿಸ್ಥಿತಿಯಲ್ಲಿದ್ದ ಅವರಿಂದ ಚಿಕಿತ್ಸೆಗಳಿಗೆ ಸೂಕ್ತವಾದ ಸ್ಪಂದನೆ ಕಂಡು ಬಂದಿರಲಿಲ್ಲ ಎಂದು ಆಸ್ಪತ್ರೆ ಸಿಇಒ ಡಾ. ಇಳಂಕುಮಾರನ್ ಕಾಲಿಯಾಮೂರ್ತಿ ಪ್ರಕಟಣೆ ಹೊರಡಿಸಿದ್ದರು.







