ಜ್ಯೂಸ್ ಎಂದು ಭಾವಿಸಿ ಆಲ್ಕೊಹಾಲ್ ಕುಡಿದ 5 ವರ್ಷದ ಬಾಲಕ ಸಾವು..!
ತಮಿಳುನಾಡು : 5 ವರ್ಷದ ಬಾಲಕನೊಬ್ಬ ಜ್ಯೂಸ್ ಎಂದು ಬಾವಿಸಿ ಆಲ್ಕೊಹಾಲ್ ಸೇವಿಸಿದ ಪರಿಣಾಮ ಮೃತಪಟ್ಟಿರುವ ಘಟನೆ ತಮಿಳುನಾಡಿದ ಅಣ್ಣಾನಗರ್ ನಲ್ಲಿ ನಡೆದಿದೆ. ಅಷ್ಟೇ ಅಲ್ಲ ಮೊಮ್ಮಗನಿಗೆ ಅನಾರೋಗ್ಯ ಉಂಟಾದ ಬೆನ್ನಲ್ಲೇ ತೀವ್ರ ಅಸ್ವಸ್ಥಗೊಂಡ ತಾತ ಕೂಡ ಅದೇ ದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಕೇಶ್ ಎನ್ನುವ ಮಗು ಹಾಗೂ ತಾತ ಚಿನ್ನಾಸ್ವಾಮಿ ಮೃತದುರ್ದೈವಿಯಾಗಿದ್ದಾರೆ.
ಮೃತ ಬಾಲಕ ತಾತ ಚಿನ್ನಸ್ವಾಮಿಯ ಕೋಣೆಯಲ್ಲಿ ಇಡಲಾಗಿದ್ದ ಆಲ್ಕೊಹಾಲ್ ಅನ್ನು ಜ್ಯೂಸ್ ಎಂದು ತಿಳಿದು ಕುಡಿದಿದ್ದಾನೆ. ಬ್ರಾಂಡಿ ಬಾಟಲಿಯನ್ನು ಜೂಸ್ ಎಂದು ಕುಡಿದಿದ್ದರ ಪರಿಣಾಮ ಮೃತಪಟ್ಟಿದ್ದಾನೆ. ಆಲ್ಕೊಹಾಲ್ ಕುಡಿದ ಘಟನೆ ಎಷ್ಟೊತ್ತಾದರೂ ಮನೆಯವರಿಗೆ ತಿಳಿದಿರಲಿಲ್ಲ.
ಬಳಿಕ ಬಾಲಕನ ಆರೋಗ್ಯದಲ್ಲಿ ಏಕಾಏಕಿ ಏರುಪೇರುಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ನಂತರ ವಿಷಯ ಗೊತ್ತಾಗಿದೆ. ಅಷ್ಟೇ ಅಲ್ಲ ಮೊಮ್ಮಗನ ಸ್ಥಿತಿ ನೋಡಿ ತೀವ್ರ ಅಸ್ವಸ್ಥಗೊಂಡಿದ್ದ ತಾತ ಚಿನ್ನಾಸ್ವಾಮಿ ಅವರು ಕೂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.







