ವಿರಾಟ್ ಸಾಧನೆ, ಫಿಟ್ನೆಸ್ ನೋಡಿದಾಗ ನನಗೆ ನನ್ನ ಬಗ್ಗೆ ನಾಚಿಕೆಯಾಗುತ್ತೆ….!
ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ನಾಯಕ. ಒಬ್ಬ ಆಟಗಾರನಾಗಿ, ಒಬ್ಬ ನಾಯಕನಾಗಿ, ಒಬ್ಬ ಕ್ರಿಕೆಟಿಗನಾಗಿ ವಿಶ್ವ ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆಗಳು, ದಾಖಲೆಗಳು ಕಣ್ಣ ಮುಂದೆಯೇ ರಾರಾಜಿಸುತ್ತಿವೆ. ಅದೇ ರೀತಿ ಅವರ ಫಿಟ್ನೆಸ್ ಕೂಡ. ಕ್ರಿಕೆಟ್ ಅಭ್ಯಾಸದ ಜೊತೆಗೆ ಫಿಟ್ನೆಸ್ಗೂ ಹೆಚ್ಚು ಮಹತ್ವ ನೀಡುವ ಕೊಹ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇದೀಗ ಬಾಂಗ್ಲಾದೇಶದ ಹಿರಿಯ ಆಟಗಾರ ತಮೀಮ್ ಇಕ್ಬಾಲ್ ಅವರು ವಿರಾಟ್ ಕೊಹ್ಲಿಯ ಫಿಟ್ನೆಸ್ ನೋಡಿ ಅಚ್ಚರಿಗೊಂಡಿದ್ರಂತೆ. ಕೊಹ್ಲಿಯವರ ಫಿಟ್ನೆಸ್ ಅವರಿಗೆ ಪ್ರೇರಣೆಯಾಗಿತ್ತಂತೆ. ಅಲ್ಲದೆ ನಾಚಿಕೆ ಕೂಡ ಆಗಿತ್ತಂತೆ ಎಂಬ ವಿಷ್ಯವನ್ನು ತಮೀಮ್ ಬಹಿರಂಗಪಡಿಸಿದ್ದಾರೆ.
ಭಾರತ ನಮ್ಮ ನೆರೆಯ ದೇಶ. ನಮ್ಮ ದೇಶದವರು ಭಾರತವನ್ನು ಸಾಕಷ್ಟು ವಿಚಾರಗಳಲ್ಲಿ ಹಿಂಬಾಲಿಸುತ್ತಾರೆ. ಅದ್ರಲ್ಲಿ ಭಾರತೀಯ ಕ್ರಿಕೆಟ್ ಕೂಡ ಒಂದು. ಭಾರತೀಯ ಕ್ರಿಕೆಟ್ ನಲ್ಲಿ ಆಗಿರುವಂತಹ ಬದಲಾವಣೆಗಳಿಂದ ಬಾಂಗ್ಲಾ ಕ್ರಿಕೆಟ್ ನಲ್ಲೂ ಬದಲಾವಣೆಯಾಗುವಂತೆ ಮಾಡಿದೆ. ಅದ್ರಲ್ಲಿ ಫಿಟ್ನೆಸ್ ಕೂಡ ಒಂದು ಎಂದು ತಮೀಮ್ ಹೇಳಿದ್ರು.
ನನಗೆ ಈ ಮಾತು ಹೇಳುವುದರಲ್ಲಿ ಯಾವುದೇ ನಾಚಿಕೆ, ಸಂಕೋಚವಿಲ್ಲ. ಯಾಕಂದ್ರೆ ಇದು ನನ್ನ ಮನಸ್ಸಿನಲ್ಲಿ ಮೂಡಿರುವಂತಹ ಭಾವನೆ. ಸುಮಾರು ಎರಡು ಮೂರು ವರ್ಷಗಳ ಹಿಂದೆ. ವಿರಾಟ್ ಕೊಹ್ಲಿ ಜಿಮ್ ನಲ್ಲಿ ನಡೆಸುತ್ತಿದ್ದ ಕಸರತ್ತು, ಓಡುತ್ತಿದ್ದ ರೀತಿ, ಬ್ಯಾಟಿಂಗ್ ಮಾಡುತ್ತಿದ್ದ ಪರಿಯನ್ನು ನೋಡಿದಾಗ ನನಗೆ ನನ್ನಲ್ಲೇ ನಾಚಿಕೆಪಡುವಂತೆ ಆಯ್ತು ಎಂದು ತಮೀಮ್ ನೆನಪಿಸಿಕೊಂಡ್ರು.
ವಿರಾಟ್ ನನ್ನ ವಯಸ್ಸಿನವರು. ಅವರು ಮಾಡಿರುವ ಸಾಧನೆಯ ಅರ್ಧದಷ್ಟು ಸಾಧನೆ ನಾನು ಮಾಡಿಲ್ಲ. ಅವರು ಏರಿರುವ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಆದ್ರೆ ಅವರನ್ನು ಮಾದರಿಯಾಗಿಟ್ಟುಕೊಳ್ಳಬೇಕು. ಆಗ ಮಾತ್ರ 50-60ರಷ್ಟು ಸಾಧನೆ ಮಾಡಲು ಸಾಧ್ಯ ಎಂದು ತಮೀಮ್ ಅವರು ವಿರಾಟ್ ಕೊಹ್ಲಿಯವರ ಫಿಟ್ನೆಸ್ ಹಾಗೂ ಸಾಮಥ್ರ್ಯವನ್ನು ಕೊಂಡಾಡಿದ್ದಾರೆ.








