ಅಬುಜಾ: ಉತ್ತರ ನೈಜೀರಿಯಾದಲ್ಲಿ (Nigeria) ಇಂಧನ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 147 ಜನರು ಸಾವನ್ನಪ್ಪಿ, 70ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ನೈಜೀರಿಯಾದ ಜಿಗಾವಾ ರಾಜ್ಯದ ಮಜಿಯಾ ಎಂಬ ಹಳ್ಳಿಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯರು ಇಂಧನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಮೃತಪಟ್ಟವರನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ.
ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅದು ಪಲ್ಟಿಯಾಗಿತ್ತು. ಒಳಚರಂಡಿ ಕಂದಕಕ್ಕೆ ಇಂಧನ ಚೆಲ್ಲಿತ್ತು. ಸ್ಥಳೀಯ ನಿವಾಸಿಗಳು ಇಂಧನ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಜಿಗಾವಾ ಪೊಲೀಸ್ ವಕ್ತಾರ ಶಿಸು ಲಾವನ್ ಆಡಮ್ ತಿಳಿಸಿದ್ದಾರೆ.
ನೈಜೀರಿಯಾದ ಉಪಾಧ್ಯಕ್ಷ ಕಾಶಿಮ್ ಶೆಟ್ಟಿಮಾ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯು ನಮ್ಮೆಲ್ಲರ ಹೃದಯ ಛಿದ್ರಗೊಳಿಸಿದೆ. ಫೆಡರಲ್ ಸರ್ಕಾರವು ಜಿಗವಾ ಜನರೊಂದಿಗೆ ನಿಂತಿದೆ. ಗಾಯಗೊಂಡವರಿಗೆ ನೆರವಾಗಲು ಮತ್ತು ಈ ವಿಪತ್ತಿನಿಂದ ಪೀಡಿತ ಕುಟುಂಬಗಳಿಗೆ ಸಹಾಯ ಮಾಡಲು ನಾವು ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗಳು ಸಾಮಾನ್ಯ. ಅಲ್ಲಿ ತೈಲ ಸರಬರಾಜನ್ನು ಆಗಾಗ್ಗೆ ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ಹೀಗಾಗಿ ಇಂತಹ ದುರ್ಘಟನೆಗಳು ಸಂಭವಿಸುತ್ತಿರುತ್ತವೆ.