ನವದೆಹಲಿ: ದೇಶದ ಪ್ರತಿಷ್ಠಿತ ಅಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ (Tata Motors) ಕೊನೆಗೂ ಪಶ್ಚಿಮ ಬಂಗಾಳ (West Bengal) ಸರ್ಕಾರದ ವಿರುದ್ಧ ಗೆಲುವು ಸಾಧಿಸಿದೆ.
ಸಿಂಗೂರಿನಲ್ಲಿ (Singur) ಟಾಟಾ ಫ್ಯಾಕ್ಟರಿ ಸ್ಥಾಪನೆ ಮಾಡುವುದಕ್ಕಾಗಿ ಹೂಡಿಕೆ ಮಾಡಿ ನಷ್ಟ ಉಂಟು ಮಾಡಿದ್ದಕ್ಕೆ ಟಾಟಾ ಕಂಪನಿ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDC) ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣ ದಶಕಗಳ ಕಾಲ ನಡೆಯಿತು. ಈ ಪ್ರಕರಣದಲ್ಲಿ ಟಾಟಾ ಮೋಟರ್ಸ್ ಗೆದ್ದಿದೆ. ನಷ್ಟ ಉಂಟು ಮಾಡಿದ್ದಕ್ಕೆ WBIDCಗೆ 766 ಕೋಟಿ ರೂ. ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಲಯ ಆದೇಶಿಸಿದೆ.
2006ರಲ್ಲಿ ಎಡ ಸರ್ಕಾರ 1 ಸಾವಿರ ಎಕರೆ ಜಾಗವನ್ನು ಹೂಗ್ಲಿ ಬದಿಯಲ್ಲಿರುವ ಸಿಂಗೂರಿನಲ್ಲಿ ಸ್ವಾಧೀನ ಪಡಿಸಿ ನಂತರ ಟಾಟಾ ಕಂಪನಿಗೆ ಹಸ್ತಾಂತರಿಸಿತ್ತು. ಟಾಟಾ ಕಂಪನಿ ಈ ಜಾಗದಲ್ಲಿ ನ್ಯಾನೋ ಕಾರು (Nano Car) ಉತ್ಪಾದನೆ ಮಾಡಲು ಘಟಕ ತೆರೆಯಲು ಮುಂದಾಗಿತ್ತು. ಇದನ್ನು ವಿರೋಧ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ವಿರೋಧಿಸಿದ್ದರು.
ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಟಾಟಾ ಕಂಪನಿಯನ್ನು ರಾಜ್ಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಒಪ್ಪಿ ಟಾಟಾ ಕಂಪನಿ ಗುಜರಾತಿನ ಸನಂದ್ಗೆ ಶಿಫ್ಟ್ ಆಗಿತ್ತು. ಆಗ ನಷ್ಟ ಭರಿಸುವಂತೆ ಟಾಟಾ ಮೋಟಾರ್ಸ್ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು.