ಟಾಟಾ ಗ್ರೂಪ್ ತನ್ನ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ಹೆಜ್ಜೆ ಹಾಕಿದ್ದು, ಭಾರತದ ಎರಡನೇ ಐಫೋನ್ ಉತ್ಪಾದನಾ ಕಾರ್ಖಾನೆಯನ್ನು ತೆರೆದಿರುವ ಪೆಗಾಟ್ರಾನ್ ಟೆಕ್ನಾಲಜಿಯ 60% ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ಚೆನ್ನೈ ಮೂಲದ ಪೆಗಾಟ್ರಾನ್ ಟೆಕ್ನಾಲಜಿ ಇಂಡಿಯಾ ಕಂಪನಿಯ ಈ ಕಾರ್ಖಾನೆಯು ತೈವಾನ್ ಮೂಲದ ಪೆಗಾಟ್ರಾನ್ ಕಾರ್ಪೊರೇಷನ್‌ನ ಅಂಗಸಂಸ್ಥೆಯಾಗಿದ್ದು, ಕರ್ನಾಟಕದ ತುಮಕೂರು ಜಿಲ್ಲೆಯ ನರಸಾಪುರದಲ್ಲಿದೆ.
ಏನಿದು ಡೀಲ್?
ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಈ ಒಪ್ಪಂದದ ವಿವರಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದರೂ, ಹಣಕಾಸಿನ ಅಂಶಗಳನ್ನು ಬಹಿರಂಗಪಡಿಸಿಲ್ಲ. ಆದರೆ ಈ ಡೀಲ್ ಮೂಲಕ ಟಾಟಾ, ಭಾರತೀಯ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ಉತ್ಸುಕಗೊಂಡಿದೆ. ಪೆಗಾಟ್ರಾನ್ ಇಂಡಿಯಾ ಪ್ರಾಥಮಿಕವಾಗಿ ಆಪಲ್‌ನಂತಹ ಜಾಗತಿಕ ಕಂಪನಿಗಳಿಗೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಒದಗಿಸುವ ಒಪ್ಪಂದದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ, ಟಾಟಾ ಗ್ರೂಪ್ ಮೊದಲ ಬಾರಿಗೆ ಆಪಲ್ ಐಫೋನ್ ಉತ್ಪಾದನಾ ಕಾರ್ಯದಲ್ಲಿ ನೇರವಾಗಿ ಭಾಗವಹಿಸಲಿದೆ.
ಭಾರತದ ಉತ್ಪಾದನಾ ಕ್ಷೇತ್ರಕ್ಕೆ ಹೊಸ ದಿಕ್ಕು
ಟಾಟಾ ಇಳಿದಿರುವ ಈ ಹೊಸ ಕ್ಷೇತ್ರವು ದೇಶೀಯ ಹಾಗೂ ವಿದೇಶಿ ಗ್ರಾಹಕರಿಗೆ ವಿಶ್ವಮಟ್ಟದ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳನ್ನು ಒದಗಿಸಲು ಪ್ರಮುಖ ಪಾತ್ರವಹಿಸಲಿದೆ.
ಟಾಟಾ ಎಲೆಕ್ಟ್ರಾನಿಕ್ಸ್‌ನ ನಿರ್ಧಾರ ಕುರಿತು ಸ್ಪಷ್ಟನೆ
ಟಾಟಾ ಎಲೆಕ್ಟ್ರಾನಿಕ್ಸ್‌ನ CEO ಮತ್ತು MD ರಂದೀರ್ ಠಾಕೂರ್, ಪೆಗಾಟ್ರಾನ್ ಟೆಕ್ನಾಲಜಿಯೊಂದಿಗೆ ಒಪ್ಪಂದ ಮಾಡಿರುವ ನಾವು ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಉತ್ಪಾದನೆಯ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ. AI ಮತ್ತು ಡಿಜಿಟಲ್ ತಂತ್ರಜ್ಞಾನದೊಂದಿಗೆ ಒಡನಾಟ ಸಾಧಿಸುತ್ತಿರುವ ಈ ಕ್ರಮವು ನಮ್ಮ ಮಾರುಕಟ್ಟೆ ತಲುಪುವಿಕೆಯನ್ನು ವಿಸ್ತರಿಸುತ್ತದೆ ಎಂದು ಹೇಳಿದ್ದಾರೆ.
ಭಾರತಕ್ಕೆ ಇದರ ಪರಿಣಾಮಗಳು
ಈ ಒಪ್ಪಂದವು ದೇಶದ ಉದ್ಯಮ ವಲಯಕ್ಕೆ ಮಹತ್ವದ ಪ್ರೇರಣೆಯಾಗಿ ಪರಿಣಮಿಸಲಿದೆ. ಉದ್ಯೋಗಾವಕಾಶಗಳ ಸೃಷ್ಟಿ, ತಾಂತ್ರಿಕ ನಾವೀನ್ಯತೆ, ಮತ್ತು ವಿಶ್ವಮಟ್ಟದ ಉತ್ಪಾದನಾ ಗುಣಮಟ್ಟವನ್ನು ತಲುಪುವ ಮೂಲಕ ಭಾರತ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಗ್ಲೋಬಲ್ ಹಬ್ ಆಗಿ ಬೆಳೆಯುವ ನಿರೀಕ್ಷೆ ಇದೆ.
ಈ ಮೂಲಕ ಟಾಟಾ ತನ್ನ ಸ್ಥಳೀಯ ಮಾರುಕಟ್ಟೆ ತಲುಪುವಿಕೆಯನ್ನು ವಿಸ್ತರಿಸಿ, ಆಂತರಿಕ ಉತ್ಪಾದನೆಯ ಮೇಲೆ ಹೆಚ್ಚು ಒತ್ತು ನೀಡುತ್ತಿದೆ. ಇದರಿಂದಾಗಿ, ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಪೂರಕವಾಗಿ ದೇಶದ ತಾಂತ್ರಿಕ ಅಭಿವೃದ್ಧಿ ಸಾಧಿಸುವ ನಿರೀಕ್ಷೆಯಿದೆ.
ವಾಹನ, ಮೊಬೈಲ್ ಸಾಧನಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ಉಪಯೋಗಗಳಿಗೆ ಅರೆವಾಹಕ ಚಿಪ್‌ಗಳನ್ನು ಉತ್ಪಾದಿಸಿ ಜಾಗತಿಕವಾಗಿ ಗ್ರಾಹಕರಿಗೆ ಪೂರೈಸುವಲ್ಲಿ ಟಾಟಾ ತೊಡಗಿಸಿಕೊಂಡಿದ್ದು, ಮುಂದಿನ 5 ವರ್ಷಗಳಲ್ಲಿ 5,00,000 ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಟಾಟಾ ಗುಂಪು ಯೋಜಿಸಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ತಿಳಿಸಿದ್ದಾರೆ.








