ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆರ್ಥಿಕ ಕ್ರೂಢೀಕರಣದ್ದೆ ದೊಡ್ಡ ಚಿಂತೆಯಾಗಿ ಬಿಡುತ್ತಿದೆ. ಒಂದೆಡೆ ಗ್ಯಾರಂಟಿಗಳಿಂದ ಬಸವಳಿದರೆ, ಇನ್ನೊಂದೆಡೆ ಕೇಂದ್ರ ಸಾಥ್ ನೀಡುತ್ತಿಲ್ಲ ಎಂಬ ಆರೋಪ. ಮತ್ತೊಂದೆಡೆ ಗ್ಯಾರಂಟಿಗೆ ಪೋಲಾಗುತ್ತಿರುವ ಹಣ. ಹೀಗಾಗಿ ಸರ್ಕಾರಕ್ಕೆ ದಿಕ್ಕು ತೋಚದಂತಾಗಿ ಬಿಟ್ಟಿದೆ.
ಈಗಾಗಲೇ ಗ್ಯಾರಂಟಿ (Congress Guarantee) ಹೊಡೆತದ ಶಾಕ್ ನಡುವೆಯೇ ತೆರಿಗೆ ಸಂಗ್ರಹ (Karnataka Tax collection) ಶಾಕ್ ಕೂಡ ಸರ್ಕಾರಕ್ಕೆ ಎದುರಾಗಿದೆ. ಈ ವರ್ಷದ ಮೊದಲ 4 ತಿಂಗಳ ತೆರಿಗೆ ಸಂಗ್ರಹದಲ್ಲಿ ಸುಮಾರು 6 ಸಾವಿರ ಕೋಟಿ ತೆರಿಗೆ ಸಂಗ್ರಹಕ್ಕೆ ಹೊಡೆತ ಬಿದ್ದಿದೆ. ತೆರಿಗೆ ಸಂಗ್ರಹ ಮಾಡಲು ಇಲಾಖೆಗಳು ಹರಸಾಹಸ ಪಡುತ್ತಿವೆ. ತೆರಿಗೆ ಸಂಗ್ರಹ ಕಡಿಮೆ ಆಗಿದ್ದು,ಆರ್ಥಿಕ ಇಲಾಖೆಗೆ ತಲೆನೋವು ತರಿಸಿದೆ.
ಏಪ್ರಿಲ್, ಮೇ, ಜೂನ್, ಜುಲೈ ತಿಂಗಳಲ್ಲಿ ಸುಮಾರು 6 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಇಲಾಖೆಗೆಳು ಹಿಂದೆ ಬಿದ್ದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ತೆರಿಗೆ ಸಂಗ್ರಹದ ವಿವರ ನೋಡುವುದಾದರೆ ವಾಣಿಜ್ಯ ತೆರಿಗೆಯಲ್ಲಿ ವಾರ್ಷಿಕ ಗುರಿ- 1,10,000 ಕೋಟಿ ರೂ. ಇದ್ದರೆ 4 ತಿಂಗಳಲ್ಲಿ ಸಂಗ್ರಹ- 32834 ಕೋಟಿ ರೂ. ಆಗಿದೆ. ಅಬಕಾರಿಯಲ್ಲಿ ವಾರ್ಷಿಕ (Tax target) ಗುರಿ 38525 ಕೋಟಿ ರೂ. ಇದ್ದರೆ ಸಂಗ್ರಹವಾಗಿರುವುದು 11932 ಕೋಟಿ ರೂ. ಆಗಿದೆ.
ಮುದ್ರಾಂಕ-ನೋಂದಣಿಯಲ್ಲಿ ವಾರ್ಷಿಕ ಗುರಿ 26000 ಕೋಟಿ ರೂ. ಇದ್ದರೆ ಸಂಗ್ರಹವಾಗಿರುವುದು 7665 ಕೋಟಿ ರೂ. ಆಗಿದೆ.
4 ತಿಂಗಳ ಗುರಿ ನೋಡುವುದಾದರೆ ಏಪ್ರಿಲ್, ಮೇ, ಜೂನ್, ಜುಲೈ ನಲ್ಲಿ ಸಂಗ್ರಹದ ಗುರಿ 58175 ಕೋಟಿ ರೂ. ಇತ್ತು. ಆದರೆ ಈಗ ಸಂಗ್ರಹವಾಗಿದ್ದು- 52431 ಕೋಟಿ ರೂ. ಆಗಿದೆ. ತೆರಿಗೆ ಸಂಗ್ರಹ ಕೊರತೆ ಸುಮಾರು 5744 ಕೋಟಿ ರೂ. ಆಗಿದೆ. ಹೀಗಾಗಿ ಸರ್ಕಾರ ಚಿಂತೆಗೆ ಜಾರುವಂತಾಗಿದೆ. ತೆರಿಗೆ ದಾರರು ಕೈ ಹಿಡಿತಾರಾ ಎಂಬುವುದನ್ನು ನೋಡಬೇಕಿದೆ.