ನವದೆಹಲಿ: ಎಲ್ಲಾ ಕ್ಷಯ ರೋಗಿಗಳನ್ನೂ ಕೋವಿಡ್-19 ಪರೀಕ್ಷೆಗೊಳಪಡಿಸಬೇಕು ಹಾಗೂ ಎಲ್ಲಾ ಕೋವಿಡ್ ರೋಗಿಗಳನ್ನು ಕ್ಷಯರೋಗ ಪತ್ತೆ ಪರೀಕ್ಷೆಗೊಳಪಡಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದೆ. ಎರಡು ರೋಗಗಳ ಲಕ್ಷಣಗಳಲ್ಲೂ ಸಾಮ್ಯತೆ ಹೊಂದಿರುವ ಹಿನ್ನೆಲೆ ಹಲವು ರಾಜ್ಯಗಳು ಈಗಾಗಲೇ ಕೋವಿಡ್ ನೆಗೆಟಿವ್ ಆದ ರೋಗಿಗಳಿಗೆ ಟಿಬಿ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿವೆ.
ಐಎಲ್ಐ ಮಾದರಿ ಅನಾರೋಗ್ಯ, ತೀವ್ರ ಶ್ವಾಸಕೋಶದ ಸೋಂಕು ಪ್ರಕರಣಗಳಲ್ಲೂ ಕ್ಷಯರೋಗ ಪತ್ತೆ ಪರೀಕ್ಷೆ ನಡೆಸಬೇಕು ಎಂದು ಸಚಿವಾಲಯ ಸೂಚಿಸಿದೆ. ಕೋವಿಡ್ ಹಾಗೂ ಕ್ಷಯ, ಈ ಎರಡೂ ರೋಗಗಳಲ್ಲಿ ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಯ ಲಕ್ಷಣಗಳಿರುತ್ತವೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.