ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಗೊಂಡ ಬಳಿಕ ಸರ್ಕಾರಿ ಶಾಲಾ ಮಕ್ಕಳಿಗೆಂದು ಆರಂಭಿಸಲಾದ `ವಿದ್ಯಾಗಮ’ ಯೋಜನೆ ಶಿಕ್ಷಕರ ಪಾಲಿಗೆ ಕೊರೊನಾಗಮವಾಗಿ ಪರಿಣಮಿಸಿದೆ. ವಿದ್ಯಾಗಮ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟ ಶಿಕ್ಷಕರ ಸಮೀಕ್ಷೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಆದೇಶ ನೀಡಿದ್ದಾರೆ.
ವಿದ್ಯಾಗಮ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಸುರೇಶ್‍ಕುಮಾರ್, ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸಲ್ಲ ಎಂದು ಹೇಳಿದ್ದಾರೆ. ಆದರೆ, ವಿದ್ಯಾಗಮಕ್ಕೆ ಹೋಗುತ್ತಿದ್ದ ಶಿಕ್ಷಕರ ಸರಣಿ ಸಾವಿನ ಲೆಕ್ಕವನ್ನು ಮಾಧ್ಯಮಗಳು ಬಿಚ್ಚಿಡುತ್ತಿದ್ದಂತೆ ಸುರೇಶ್‍ಕುಮಾರ್ ಮೆತ್ತಗಾಗಿದ್ದಾರೆ.
ಈ ಶಿಕ್ಷಕರು ವಿದ್ಯಾಗಮದಡಿ ಪಾಠ ಮಾಡಲು ಹೋಗುತ್ತಿದ್ದ ವೇಳೆಯೇ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರಾ ? ಇಲ್ಲವಾ ? ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ. ಆದಷ್ಟು ಬೇಗ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡುವಂತೆ ಎಲ್ಲಾ ಜಿಲ್ಲೆಗಳ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
`ವಿದ್ಯಾಗಮ’ ಯೋಜನೆ `ಕೊರೊನಾಗಮ’ವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಸ್ಥಗಿತಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಡೆಡ್‍ಲೈನ್ ನೀಡಿರುವ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಕ್ಕೆ ಸುರೇಶ್ ಕುಮಾರ್ ಸೂಚನೆ ಮುಂದಾಗಿದ್ದಾರೆ.
`ವಿದ್ಯಾಗಮ’ ಮುಂದುವರೆಯುತ್ತದೆ; ಸುರೇಶ್‍ಕುಮಾರ್
ವಿದ್ಯಾಗಮ ಯೋಜನೆ ವೈಫಲ್ಯ ಎನ್ನುವುದು ತಪ್ಪು, ಹೀಗಾಗಿ ವಿದ್ಯಾಗಮ ಯೋಜನೆ ಮುಂದುವರೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿದ್ಯಾಗಮ ಯೋಜನೆಯ ಕಾರಣಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲುತ್ತದೆ ಎಂದು ಬಿಂಬಿಸುತ್ತಿರುವುದು ವಿಷಾಧನೀಯ. ವಿದ್ಯಾಗಮ ತರಗತಿಗಳಿಂದ ಮಕ್ಕಳಿಗೆ ಕೊರೊನಾ ಸೋಂಕು ತಗುಲಿಲ್ಲ. ರಾಜ್ಯಾದ್ಯಂತ 49.34 ಲಕ್ಷ ಮಕ್ಕಳು ವಿದ್ಯಾಮ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ವಿದ್ಯಾಗಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಕೊರೊನಾ ಸೋಂಕು ತಗುಲಿರುವುದು ಎಲ್ಲಿಯೂ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.