ಮಯಾಂಕ್ ಗೆ ಚಾನ್ಸೇ ಕೊಡುತ್ತಿಲ್ಲ.. ಅವಕಾಶ ಕೈಚೆಲ್ಲಿಕೊಂಡ ಶುಬ್ಮನ್.. ಬಕ ಪಕ್ಷಿಯಂತೆ ಕಾಯುತ್ತಿರುವ ಪೃಥ್ವಿ ಶಾ..!
ಶುಬ್ಮನ್ ಗಿಲ್.. ಸಾಕಷ್ಟು ಭರವಸೆ ಮೂಡಿಸಿದ್ದ ಬ್ಯಾಟ್ಸ್ ಮೆನ್. ಟೀಮ್ ಇಂಡಿಯಾದ ಆರಂಭಿಕ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರೆ ಅನ್ನೋ ನಂಬಿಕೆ ಇತ್ತು. ಆದ್ರೆ ಶುಬ್ಮನ್ ಗಿಲ್ ಎಲ್ಲಾ ನಿರೀಕ್ಷೆ ಹಾಗೂ ಭರವಸೆಗಳನ್ನು ಹುಸಿಗೊಳಿಸಿದ್ದಾರೆ. ಸಿಕ್ಕ ಸಾಲು ಸಾಲು ಅವಕಾಶಗಳನ್ನು ಕೈಚೆಲ್ಲಿಕೊಳ್ಳುತ್ತಿದ್ದಾರೆ.
ಹೌದು, ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲೂ ರನ್ ದಾಖಲಿಸಲು ಶುಭ್ಮನ್ ಗಿಲ್ ವಿಫಲವಾಗಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ 28 ರನ್ ಗಳಿಸಿದ್ರೆ, ಎರಡನೇ ಇನಿಂಗ್ಸ್ ನಲ್ಲಿ ಕೇವಲ 8 ರನ್ ಗೆ ತನ್ನ ಹೋರಾಟವನ್ನು ಕೊನೆಗೊಳಿಸಿದ್ದಾರೆ.
ಇಲ್ಲಿಯವರೆಗೆ ಶುಬ್ಮನ್ ಗಿಲ್ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 35ರ ಸರಾಸರಿಯಲ್ಲಿ ಗಳಿಸಿದ್ದು 378 ರನ್. ಇದ್ರಲ್ಲಿ ಮೂರು ಅರ್ಧಶತಕಗಳಿವೆ.
ಹಾಗಂತ ಶುಬ್ಮನ್ ಗಿಲ್ ಅವರ ಪ್ರತಿಭೆ ಸಾಮಥ್ರ್ಯವನ್ನು ಕೇವಲ ಏಳು ಟೆಸ್ಟ್ ಪಂದ್ಯಗಳಲ್ಲಿ ಅಳತೆ ಮಾಡುವುದು ಕೂಡ ಸರಿಯಲ್ಲ. ಆದ್ರೂ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸ್ಪರ್ಧಾತ್ಮಕ ದಿನಗಳಲ್ಲಿ ಅವಕಾಶವನ್ನು ಕೈಚೆಲ್ಲಿದ್ರೆ ಮತ್ತೆ ತಂಡದಲ್ಲಿ ಸ್ಥಾನ ಸಿಗುತ್ತೊ ಇಲ್ವೋ ಗೊತ್ತಿಲ್ಲ.
ಇದಕ್ಕೆ ಪೃಥ್ವಿ ಶಾ ಅತ್ಯುತ್ತಮ ಉದಾಹರಣೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ದಾಖಲಿಸಿ ಗಮನ ಸೆಳೆದಿದ್ದ ಪೃಥ್ವಿ ಶಾ ಆನಂತರ ಗಾಯ, ಕಳಪೆ ಫಾರ್ಮ್ ನಿಂದಾಗಿ ಟೀಮ್ ಇಂಡಿಯಾದಿಂದ ಹೊರನಡೆದಿದ್ದರು. ಆಸ್ಟ್ರೇಲಿಯಾ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯ ಮತ್ತು ನಾಲ್ಕು ರನ್ ಗಳಿಸಿದ್ದ ನಂತರ ಪೃಥ್ವಿ ಶಾ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ.
ಆದ್ರೆ ಆಸ್ಟ್ರೇಲಿಯಾ ಸರಣಿಯಿಂದ ಹೊರಬಿದ್ದ ಬಳಿಕ ಪೃಥ್ವಿ ಶಾ ದೇಶಿ ಟೂರ್ನಿಯಲ್ಲಿ ರನ್ ಮಳೆ ಸುರಿಸಿದ್ದರು. ಅದೇ ರೀತಿ ಐಪಿಎಲ್ ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು.. ಆದ್ರೂ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದೀಗ ಪೃಥ್ವಿ ಶಾ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪೃಥ್ವಿ ಶಾ ಅವಕಾಶವನ್ನು ಕಸಿದುಕೊಂಡ ಶುಬ್ನನ್ ಗಿಲ್ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಹೀಗಾಗಿ ಶುಬ್ಮನ್ ಗಿಲ್ ಸ್ಥಾನವನ್ನು ಪೃಥ್ವಿ ಶಾ ಮತ್ತೆ ಕಸಿದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಪೃಥ್ವಿ ಶಾ ಐದು ಟೆಸ್ಟ್ ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 339 ರನ್ ಪೇರಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳಿವೆ.
ಇನ್ನೊಂದೆಡೆ ಮಯಾಂಕ್ ಅಗರ್ ವಾಲ್. ನತದೃಷ್ಟ ಕ್ರಿಕೆಟಿಗ. ಮೊದಲೇ ಟೀಮ್ ಇಂಡಿಯಾದಲ್ಲಿ ತಡವಾಗಿ ಅವಕಾಶ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಬಳಸಿಕೊಂಡ್ರೂ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿಲ್ಲ.
ಕಳೆದ ಆಸ್ಟ್ರೇಲಿಯಾ ಸರಣಿಯ ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಆಡಿದ ನಂತರದ ಟೀಮ್ ಇಂಡಿಯಾದ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಮಯಾಂಕ್ ಅಗರ್ ವಾಲ್ ಮೊದಲ ಇನಿಂಗ್ಸ್ ನಲ್ಲಿ 38 ರನ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ 9 ರನ್ ಗಳಿಸಿದ್ದರು.
ಇಲ್ಲಿಯವರೆಗೆ 14 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಯಾಂಕ್ ಅಗರ್ ವಾಲ್ 46ರ ಸರಾಸರಿಯಲ್ಲಿ 1052 ರನ್ ಪೇರಿಸಿದ್ದಾರೆ. ಎರಡು ದ್ವಿಶತಕ ಸೇರಿ ಮೂರು ಶತಕಗಳನ್ನು ಸಿಡಿಸಿರುವ ಮಯಾಂಕ್, ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಅಂಕಿ ಅಂಶಗಳನ್ನು ನೋಡಿದಾಗ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಮಯಾಂಕ್ ಅಗರ್ ವಾಲ್ ಗೆ ಅವಕಾಶ ನೀಡಬೇಕಾಗಿತ್ತು. ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಗಿಲ್ ಗಿಂತ ಮಯಾಂಕ್ ಆಯ್ಕೆ ಉತ್ತಮವಾಗಿತ್ತು. ಆದ್ರೆ ಟೀಮ್ ಮ್ಯಾನೇಜ್ ಮೆಂಟ್ ಕರ್ನಾಟಕದ ಆಟಗಾರರನಿಗೆ ಅವಕಾಶ ನೀಡಲಿಲ್ಲ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ನ ಆಯ್ಕೆಯ ಮಾನದಂಡವೇ ಅರ್ಥವಾಗುತ್ತಿಲ್ಲ. ಶುಬ್ಮನ್ ಗಿಲ್ ಗೆ ಸಾಲು ಸಾಲು ಅವಕಾಶಗಳನ್ನು ನೀಡಲಾಗಿತ್ತು. ಆದ್ರೆ ಮಯಾಂಕ್ ಅಗರ್ ವಾಲ್ ಗೆ ಅಂತಹ ಅವಕಾಶವನ್ನೇ ನೀಡಲಾಗಿಲ್ಲ. ಕಾರಣ ಏನು ಎಂಬುದೇ ಆರ್ಥವಾಗುತ್ತಿಲ್ಲ.