ಬಿಸಿಸಿಐ ನಿಷೇಧದಿಂದ ಬುದ್ಧಿ ಕಲಿತ ಸ್ಟಾರ್ ಬ್ಯಾಟ್ಸ್ ಮೆನ್ ಕೆ.ಎಲ್. ರಾಹುಲ್
ಒಂದು ಮಾತಿದೆಯಲ್ಲಾ… ಕೆಟ್ಟ ಮೇಲೆ ಬುದ್ದಿ ಬಂತು ಅಂತ.. ಹಾಗಂತ ತಪ್ಪು ಮಾಡದವರು ಯಾರು ಇಲ್ಲ. ಬದುಕಿನಲ್ಲಿ ಪ್ರತಿಯೊಬ್ಬರು ತಪ್ಪು ಮಾಡಿಯೇ ಮಾಡುತ್ತಾರೆ. ಆದ್ರೆ ತಾನು ಮಾಡಿದ್ದು, ಮಾಡುತ್ತಿರುವುದು ತಪ್ಪು ಅಂತ ಗೊತ್ತಾದಾಗ ಬದುಕಿನಲ್ಲಿ ಕೆಲವೊಂದು ಬದಲಾವಣೆಯಾಗುತ್ತದೆ. ಆ ಬದಲಾವಣೆಯಿಂದ ತನ್ನ ಬದುಕು ಉನ್ನತ ಮಟ್ಟಕ್ಕೆ ಹೋದಾಗ ಹಳೆಯ ದಿನಗಳು ನೆನಪಾಗುತ್ತದೆ. ಛೇ… ನಾನು ಆ ರೀತಿ ಮಾಡಬಾರದಿತ್ತು ಅಂತ.
ಹಾಗೇ ನಮ್ಮ ಟೀಮ್ ಇಂಡಿಯಾ ಕಲಾತ್ಮಕ ಬ್ಯಾಟ್ಸ್ಮೆನ್ ಕೆ. ಎಲ್. ರಾಹುಲ್ ಕೂಡ. ಕೆ.ಎಲ್. ರಾಹುಲ್ ಅಂತ ಕ್ಷಣ ನೆನಪಾಗೋದು ರಾಹುಲ್ ದ್ರಾವಿಡ್. ಅದಕ್ಕಾಗಿಯೇ ಕೆ.ಎಲ್. ರಾಹುಲ್ ಅವರನ್ನು ಜ್ಯೂನಿಯರ್ ದ್ರಾವಿಡ್
ಅಂತನೂ ಕರೆಯುತ್ತಾರೆ. ಕೆ.ಎಲ್. ರಾಹುಲ್ ಎಷ್ಟು ಬದ್ಧತೆಯ ಕ್ರಿಕೆಟಿಗ ಎಂಬುದು ಅವರನ್ನು ಹತ್ತಿರದಿಂದ ನೋಡಿದವರಿಗೆ ಗೊತ್ತು. ಕ್ರಿಕೆಟ್ ಮೇಲಿನ ಪ್ರೀತಿ, ಬದ್ಧತೆ, ಏಕಾಗ್ರತೆಯಿಂದಲೇ ಅವರು ಇಂದು ಈ ಮಟ್ಟಕ್ಕೆ ಬೆಳೆದಿರುವುದು.
ಕೆ. ಎಲ್. ರಾಹುಲ್ ಈಗ ಟೀಮ್ ಇಂಡಿಯಾದ ಅಪತ್ಬಾಂಧವ. ಆದ್ರೆ ಟೀಮ್ ಇಂಡಿಯಾದಲ್ಲಿ ಅವರು ಸ್ಥಾನ ಭದ್ರಪಡಿಸಿಕೊಳ್ಳಲು ಸಾಕಷ್ಟು ಪರದಾಟ ನಡೆಸಿದ್ದರು. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ್ರೂ ಕೆಲವೊಂದು ವಿಚಾರಗಳಿಂದ ಕೆ.ಎಲ್. ರಾಹುಲ್ ನಾನಾ ಟೀಕೆಗಳಿಗೂ ಗುರಿಯಾಗಬೇಕಾಯ್ತು. ಕ್ರಿಕೆಟ್ ಜೊತೆಗೆ ಸಾಮಾಜಿಕ ಜಾಲ ತಾಣದಲ್ಲೂ ಸಕ್ರೀಯವಾಗುತ್ತಿದ್ದ ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ ಜೊತೆ ಕಾಫಿ ವಿಥ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ಆ ಒಂದು ಹೇಳಿಕೆ ನೀಡಿ ಅಚ್ಚರಿಗೊಳಿಸಿದ್ದರು. ಆ ಕ್ಷಣದಲ್ಲಿ ಕೆ.ಎಲ್. ರಾಹುಲ್ ಬಾಯಿಂದ (ತಮಾಷೆಯಾಗಿರಬಹುದು) ಈ ಮಾತು ಬಂದುಬಿಟ್ಟಿತ್ತು.
ಆದ್ರ ಪರಿಣಾಮ ಮಾತ್ರ ಬೇರೆನೇ ಆಗಿತ್ತು. ಕೆ.ಎಲ್. ರಾಹುಲ್ ಮೇಲಿದ್ದ ಅಭಿಮಾನಕ್ಕೂ ದಕ್ಕೆಯಾಗಿತ್ತು. ಅಷ್ಟೇ ಅಲ್ಲ, ಬಿಸಿಸಿಐ, (ಸಿಒಎ) ಕೂಡ ನಿಷೇಧ ಕೂಡ ಹೇರಿತ್ತು. ಎರಡು ವಾರಗಳ ನಂತರ ಮತ್ತೆ ತಂಡ ಸೇರಿಕೊಂಡ್ರು ಎಂಬುದು ಬೇರೆ ವಿಚಾರ. 2019ರಲ್ಲಿ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಸರಣಿಯನ್ನು ಆಡುತ್ತಿದ್ದರು. ಅಲ್ಲದೆ ತಂಡದಿಂದ ಅವರನ್ನು ವಾಪಸ್ ಕರೆಸಲಾಗಿತ್ತು. ಆದ್ರೆ ಬಿಸಿಸಿಐನ ಸಿಒಎ ನಿಷೇಧ ಹೇರಿದಾಗ ಕೆ.ಎಲ್. ರಾಹುಲ್ ಸಹಜವಾಗಿಯೇ ಸಿಟ್ಟುಗೊಂಡಿದ್ದರು.
2019ರ ಆ ಘಟನೆಯ ನಂತರ ನಾನು ಸ್ಥಿರ ಪ್ರದರ್ಶನ ನೀಡಲು ಏನೆಲ್ಲಾ ಯೋಚಿಸಿದ್ದೆ. ಸಹಜವಾಗಿಯೇ ಕುಪಿತಗೊಂಡಿದ್ದೆ. ಆಗ ನಾನು
ಸ್ವಾರ್ಥಿಯಾಗಬೇಕು. ನನಗಾಗಿ ನಾನು ಆಡಬೇಕು ಅಂತ ಅಂದುಕೊಂಡಿದ್ದೆ. ಆದ್ರೆ ಅದರಲ್ಲಿ ನಾನು ವಿಫಲನಾದೆ. ಆಗ ನಾನು ನನ್ನೊಳಗೆ ನಾನೇ ಅಂದುಕೊಂಡೆ. ನಾನು ಇದ್ರಿಂದ ಹೊರಬರಬೇಕು. ತಂಡಕ್ಕೆ ಏನು ಬೇಕೋ ಅದನ್ನು ಆಡಬೇಕು ಅಂತ. ಈ ಯೋಚನೆ ನನ್ನ ಕ್ರಿಕೆಟ್ ಬದುಕಿಗೆ ಹೊಸ ತಿರುವನ್ನು ನೀಡಿತ್ತು ಅಂತಾರೆ ಕೆ.ಎಲ್. ರಾಹುಲ್.
ಅಷ್ಟೇ ಅಲ್ಲ, ಈ ನಿಷೇಧದಿಂದ ನಾನು ಸಾಕಷ್ಟು ಪಾಠವನ್ನು ಕಲಿತೆ. ಕ್ರಿಕೆಟ್ ಬದುಕಿನ ಬಗ್ಗೆ ಯೋಚನೆ ಮಾಡಲು ಸಾಧ್ಯವಾಯ್ತು. ಕ್ರಿಕೆಟ್ನಲ್ಲಿ ನಮ್ಮ ಕೆರಿಯರ್ ಜಾಸ್ತಿ ದಿನ ಇರಲ್ಲ. ಆದ್ರೆ ಈ ನಿಷೇಧದಿಂದ ನಾನು ಇನ್ನೂ 10-11 ವರ್ಷ ಆಡಬಹುದು ಎಂಬ ಯೋಚನೆ ಬಂತು. ನನ್ನ ಎಲ್ಲಾ ಸಮಯವನ್ನು ಕ್ರಿಕೆಟ್ಗಾಗಿ ಮೀಸಲಿಟ್ಟೆ. ಒಬ್ಬ ಆಟಗಾರನಾಗಿ ಹಾಗೂ ತಂಡದ ಆಟಗಾರನಾಗಲು ನಾನು ಎಲ್ಲಾ ರೀತಿಯ ಶ್ರಮವನ್ನು ಹಾಕಿದ್ದೇನೆ. ಇದಕ್ಕಾಗಿ ನಾನು ನನ್ನ ಮೇಲೆ ಒತ್ತಡ
ಹಾಕಿಕೊಂಡೆ. ಹೀಗಾಗಿಯೇ ತಂಡದ ಆಟಗಾರನಾಗುವುದರ ಜೊತೆಗೆ ಚಾಂಪಿಯನ್ ತಂಡದ ಭಾಗವಾಗಲು ಸಾಧ್ಯವಾಯ್ತು ಅಂತ ಹೇಳ್ತಾರೆ ಕೆ.ಎಲ್. ರಾಹುಲ್.
ಇದೇ ವೇಳೆ ರೋಹಿತ್ ಶರ್ಮಾ ಅವರ ಸಹಾಯವನ್ನು ಕೆ.ಎಲ್. ರಾಹುಲ್ ಇದೇ ಸಂದರ್ಭದಲ್ಲಿ ನೆನಪಿಸಿಕೊಂಡ್ರು. ಶಿಖರ್ ಧವನ್ ಗಾಯಗೊಂಡಾಗ ರೋಹಿತ್ ಆರಂಭಿಕನಾಗಿ ನನ್ನ ಆಯ್ಕೆಯನ್ನೇ ಮಾಡಿದ್ದರು. ರೋಹಿತ್ ನನ್ನ ಮೇಲೆ ಅಪಾರವಾದ ನಂಬಿಕೆಯನ್ನಿಟ್ಟುಕೊಂಡಿದ್ದರು. ತಂಡದ ಹಿರಿಯ ಆಟಗಾರರು ಈ ರೀತಿಯ ಜವಾಬ್ದಾರಿಯನ್ನು ನೀಡಿದಾಗ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಜೊತೆಗೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಕೆ.ಎಲ್. ರಾಹುಲ್ ಹೇಳಿದ್ರು.








