ಆಸ್ಟ್ರೇಲಿಯಾ – ಇಂಗ್ಲೆಂಡ್ ವಿರುದ್ಧದ ಸರಣಿಗಳು ಮತ್ತು ಎಂಟು ಅದ್ಭುತಗಳು..!
Team India win consecutive series – India is likely to dominate world cricket
ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ನ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದೆ. ಕಳೆದ ಆರು ತಿಂಗಳಲ್ಲಿ ನಡೆದ ಎರಡು ದೇಶಗಳ ವಿರುದ್ಧದ ಆರು ಸರಣಿಗಳಲ್ಲಿ ಟೀಮ್ ಇಂಡಿಯಾ ಸಂಪೂರ್ಣವಾಗಿ ಮೇಲು ಗೈ ಸಾಧಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಸೋತಿರುವುದನ್ನು ಬಿಟ್ರೆ, ಇನ್ನುಳಿದ ಐದು ಸರಣಿಗಳನ್ನು ಟೀಮ್ ಇಂಡಿಯಾ ಕೈ ವಶ ಮಾಡಿಕೊಂಡಿದೆ.
ಅಷ್ಟೇ ಅಲ್ಲ, ಗಾಯ, ಕೋವಿಡ್ ಆತಂಕ, ಜೈವಿಕ ಸುರಕ್ಷತೆ ಸೇರಿದಂತೆ ಕಠಿಣ ಪರಿಸ್ಥಿತಿಯಲ್ಲೂ ಟೀಮ್ ಇಂಡಿಯಾ ಹುಡುಗರು ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ.
2020ರ ಐಪಿಎಲ್ ಗುಂಗಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಆಡಿತ್ತು. ಆದ್ರೆ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ್ರೂ ಟಿ-ಟ್ವೆಂಟಿ ಸರಣಿ ಗೆಲ್ಲುವ ಮೂಲಕ ಮರ್ಯಾದೆ ಉಳಿಸಿಕೊಂಡಿತ್ತು.
ಬಳಿ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಾಗ ಟೀಮ್ ಇಂಡಿಯಾಗೆ ಆಘಾತ ಕಾದಿತ್ತು. ಇನ್ನೇನೂ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಮುಖಭಂಗ ಅನುಭವಿಸುತ್ತೆ ಅಂದುಕೊಳ್ಳುವಷ್ಟರಲ್ಲಿ ಹೊಸ ಚೈತನ್ಯ ಪಡೆದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಸರಣಿಯನ್ನು 2-1ರಿಂದ ಗೆದ್ದು ಬೀಗಿತ್ತು.
ಅಂದ ಹಾಗೇ ಆಸ್ಟ್ರೇಲಿಯಾ ಸರಣಿಯಲ್ಲಿ ಟೀಮ್ ಇಂಡಿಯಾದ ನಾಲ್ಕು ಆಟಗಾರರ ಪ್ರತಿಭೆ ಮತ್ತು ಸಾಮಥ್ರ್ಯ ಅನಾವರಣಗೊಂಡಿತ್ತು. ಟಿ. ನಟರಾಜನ್, ಶುಬ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಮಹಮ್ಮದ್ ಸೀರಾಜ್ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ಗಮನ ಸೆಳೆದ್ರು.
ಅಷ್ಟೇ ಅಲ್ಲ, ಈ ನಡುವೆ ಟೀಕೆಗೆ ಗುರಿಯಾಗಿದ್ದ ರಿಷಬ್ ಪಂತ್ ಮತ್ತೆ ಫಾರ್ಮ್ ಕಂಡುಕೊಂಡು ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ರು.
ಇದಾದ ಬಳಿಕ, ಇಂಗ್ಲೆಂಡ್ ಸರಣಿ. ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮತ್ತೆ ಹೀನಾಯ ಸೋಲು ಕಂಡಿತ್ತು. ಇದ್ರಿಂದ ಎಚ್ಚೆತ್ತುಕೊಂಡ ಕೊಹ್ಲಿ ಹುಡುಗರು ನಂತರದ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿತ್ತು. ಟೆಸ್ಟ್ ಸರಣಿಯಲ್ಲಿ ಅಕ್ಸರ್ ಪಟೇಲ್ ಅನ್ನೋ ಸ್ಪಿನ್ ಮಾಂತ್ರಿಕನನ್ನು ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ಗೆ ಪರಿಚಯಿಸಿತ್ತು.
ಹಾಗೇ ಐದು ಪಂದ್ಯಗಳ ಟಿ-ಟ್ವೆಂಟಿ ಸರಣಿಯಲ್ಲೂ ಟೀಮ್ ಇಂಡಿಯಾ ಅದ್ಭುತವಾದ ಪ್ರದರ್ಶನವನ್ನು ನೀಡಿತ್ತು. ಈ ಸರಣಿಯಲ್ಲಿ ಇಶಾನ್ ಕಿಶಾನ್ ಮತ್ತು ಸೂರ್ಯಕುಮಾರ್ ಯಾದವ್ ಅನ್ನೋ ಸ್ಪೋಟಕ ಬ್ಯಾಟ್ಸ್ ಮೆನ್ ಗಳು ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸಿದ್ರು.
ಇನ್ನು ಏಕದಿನ ಸರಣಿಯಲ್ಲೂ ಅಷ್ಟೇ.. ಮೊದಲ ಪಂದ್ಯವನ್ನು ಗೆದ್ರೂ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ಮತ್ತೆ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಕೃನಾಲ್ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಟ್ಟು ಮಿಂಚು ಹರಿಸಿದ್ರು.
ಒಟ್ಟು ಎರಡು ಸರಣಿ, ಎಂಟು ಅದ್ಭುತ ಕ್ರಿಕೆಟಿಗರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪರಿಚಯಿಸಿದ ಹೆಮ್ಮೆ ಟೀಮ್ ಇಂಡಿಯಾದ್ದು.
ಈ ನಡುವೆ, ಕೆ.ಎಲ್, ರಾಹುಲ್, ರೋಹಿತ್ ಶರ್ಮಾ, ಶಿಖರ್ ಧವನ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಲಯ ಕಳೆದುಕೊಂಡು ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ.
ಒಟ್ಟಾರೆ, ಸರಣಿಯಲ್ಲಿ ಭುವನೇಶ್ವರ್ ಕುಮಾರ್, ಅಶ್ವಿನ್ ಟೀಮ್ ಇಂಡಿಯಾದ ಯಶಸ್ವಿನಲ್ಲಿ ಪ್ರಮುಖ ಪಾತ್ರವಹಿಸಿದ್ರೆ, ರಿಷಬ್ ಪಂತ್ ಮ್ಯಾಚ್ ವಿನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಹಾಗೇ ವಿರಾಟ್ ಕೊಹ್ಲಿ ಯಶಸ್ವಿ ನಾಯಕನಾಗಿ ವಿಶ್ವ ಕ್ರಿಕೆಟ್ ನಲ್ಲಿ ರಾರಾಜಿಸುತ್ತಿದ್ದಾರೆ.