ಟೀಮ್ ಇಂಡಿಯಾದ ಜಿಂಬಾಬ್ವೆ ಪ್ರವಾಸವೂ ರದ್ದು..!
ಟೀಮ್ ಇಂಡಿಯಾ ಆಟಗಾರರು ಸದ್ಯಕ್ಕಂತೂ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿಲ್ಲ. ಕೊರೋನಾ ವೈರಸ್‍ನಿಂದಾಗಿ ಮನೆಯಲ್ಲೇ ಕುಳಿತಿರುವ ಟೀಮ್ ಇಂಡಿಯಾ ಆಟಗಾರರು ತಮ್ಮ ದೈನಂದಿನ ಫಿಟ್‍ನೆಸ್ ಜೊತೆಗೆ ಸಾಮಾಜಿಕ ಜಾಲ ತಾಣದಲ್ಲೇ ಬಿಝಿಯಾಗಿಬಿಟ್ಟಿದ್ದಾರೆ.

ಇನ್ನೊಂದೆಡೆ ಬಿಸಿಸಿಐ ಕ್ರಿಕೆಟ್ ಟೂರ್ನಿಗಳನ್ನು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಮುಖ್ಯವಾಗಿ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಎಲ್ಲಾ ರೀತಿಯ ಅವಕಾಶಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ನಡುವೆ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಮತ್ತ ಶ್ರೀಲಂಕಾ ಪ್ರವಾಸಗಳನ್ನು ರದ್ದುಗೊಳಿಸಿದೆ. ಇದೀಗ ಆಗಸ್ಟ್ ನಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ಪ್ರವಾಸವನ್ನು ಕೂಡ ರದ್ದು ಮಾಡಿದೆ.
ಈ ಹಿಂದೆ ವೇಳಾಪಟ್ಟಿ ನಿಗದಿಯಾಗಿದ್ದಂತೆ ಮಾರ್ಚ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಟೀಮ್ ಇಂಡಿಯಾ ಆಡಬೇಕಿತ್ತು. ಬಳಿಕ ಐಪಿಎಲ್, ಆನಂತರ ಜೂನ್ ಕೊನೆವಾರ ಮತ್ತು ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಮಾಡಬೇಕಿತ್ತು. ಬಳಿಕ ಆಗಸ್ಟ್ 22ರಿಂದ ಜಿಂಬಾಬ್ವೆಯಲ್ಲಿ ಮೂರು ಏಕದಿನ ಸರಣಿಯನ್ನು ಆಡಬೇಕಿತ್ತು. ಆದ್ರೆ ಈ ಎಲ್ಲಾ ಸರಣಿಗಳನ್ನು ಬಿಸಿಸಿಐ ಮೊಟಕುಗೊಳಿಸಿದೆ.
ಮುಂಬರುವ ದಿನಗಳಲ್ಲಿ ಅಂದ್ರೆ ಸೆಪ್ಟಂಬರ್‍ನಲ್ಲಿ ಏಷ್ಯಾಕಪ್ ಟಿ-ಟ್ವೆಂಟಿ, ಹಾಗೂ ಅಕ್ಟೋಬರ್ ನವೆಂಬರ್ ನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ನಡೆಯಲಿದೆ. ಆದ್ರೆ ಈ ಎರಡು ಪ್ರತಿಷ್ಠಿತ ಟೂರ್ನಿಗಳ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಈ ನಡುವೆ ಈ ಎರಡು ಪ್ರತಿಷ್ಠಿತ ಟೂರ್ನಿಗಳು ಮುಂದೂಡಲ್ಪಟ್ಟರೇ, ಆ ಸಮಯದಲ್ಲಿ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಬಿಸಿಸಿಐ ಪ್ಲಾನ್ ಮಾಡಿಕೊಳ್ಳುತ್ತಿದೆ.
ಕೊರೋನಾ ವೈರಸ್ ಕಾರಣದಿಂದಾಗಿ ಮುಂಬರುವ ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಆಡುತ್ತಿಲ್ಲ. ಲಂಕಾದಲ್ಲಿ ಜೂನ್ ಮತ್ತು ಜುಲೈನಲ್ಲಿ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಬೇಕಿತ್ತು. ಹಾಗೇ ಆಗಸ್ಟ್ 22ರಿಂದ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿತ್ತು. ಆದ್ರೆ ಕೋವಿಡ್-19 ಅಡ್ಡಿಯನ್ನುಂಟು ಮಾಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಟೀಮ್ ಇಂಡಿಯಾ ಆಟಗಾರರು ಇನ್ನೂ ಮೈದಾನಕ್ಕೆ ಇಳಿದಿಲ್ಲ. ಅದು ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಪಂದ್ಯವನ್ನಾಡಲು ಟೀಮ್ ಇಂಡಿಯಾ ಆಟಗಾರರಿಗೆ ಕನಿಷ್ಠ ನಾಲ್ಕರಿಂದ ಆರು ವಾರಗಳ ಕಾಲ ತರಬೇತಿ ಶಿಬಿರದ ಅವಶ್ಯಕತೆ ಇದೆ. ಹಾಗೇ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ಪರಿಸ್ಥಿತಿ ಸುಧಾರಿಸಿದ್ರೆ ಮಾತ್ರ ಆಟಗಾರರಿಗೆ ತರಬೇತಿ ನಡೆಸಲು ಅವಕಾಶ ನೀಡುವುದಾಗಿ ಜಯ್ ಶಾ ಹೇಳಿದ್ದಾರೆ.








