ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾರತ ಪ್ರವಾಸವೂ ಮುಂದೂಡಿಕೆ…!
ಕೊರೋನಾ ಸೋಂಕಿನಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸರಣಿಯೂ ಮುಂದೂಡಲಾಗುತ್ತಿದೆ. ಈಗಾಗಲೇ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಜಿಂಬಾಬ್ವೆ, ಏಷ್ಯಾಕಪ್ ಸರಣಿಗಳು ರದ್ದುಗೊಂಡಿವೆ. ಅದೇ ರೀತಿ ಈಗ ಇಂಗ್ಲೆಂಡ್ ತಂಡದ ಭಾರತ ಪ್ರವಾಸವೂ ಸದ್ಯಕ್ಕೆ ರದ್ದುಗೊಂಡಿದೆ.
ಇನ್ನೊಂದೆಡೆ, ಇಂಗ್ಲೆಂಡ್ನಲ್ಲಿ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ನಡೆಯುತ್ತಿದೆ. ವೆಸ್ಟ್ ಇಂಡೀಸ್ ಸರಣಿ ನಂತರ ಪಾಕ್ ವಿರುದ್ಧ ಇಂಗ್ಲೆಂಡ್ ಆಡಲಿದೆ. ಆದ್ರೆ ಇಂಗ್ಲೆಂಡ್ ಮಾತ್ರ ಭಾರತ ಪ್ರವಾಸ ಕೈಗೊಳ್ಳುತ್ತಿಲ್ಲ. ಈ ಹಿಂದೆ ನಿಗದಿಯಾದಂತೆ ಸೆಪ್ಟಂಬರ್ ನಲ್ಲಿ ಇಂಗ್ಲೆಂಡ್ ತಂಡ ಭಾರತದಲ್ಲಿ ಮೂರು ಟಿ-ಟ್ವೆಂಟಿ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಬೇಕಿತ್ತು. ಆದ್ರೆ ಭಾರತದಲ್ಲಿ ಕೋವಿಡ್ -19 ಸೋಂಕು ಹೆಚ್ಚುತ್ತಿರುವುದರಿಂದ ಈ ಸರಣಿಯನ್ನು ಮುಂದೂಡಲಾಗಿದೆ. ಅದೇ ರೀತಿ ಮುಂದಿನ ತಿಂಗಳು ನ್ಯೂಜಿಲೆಂಡ್ ಎ ತಂಡದ ಭಾರತ ಪ್ರವಾಸವನ್ನು ಮುಂದೂಡಲಾಗಿದೆ.
ಈ ಬಗ್ಗೆ ಬಿಸಿಸಿಐ ಶುಕ್ರವಾರ ಅಧಿಕೃತ ಘೋಷಣೆ ಮಾಡಲಿದೆ. ಶುಕ್ರವಾರದಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮೀಟಿಂಗ್ ನಲ್ಲಿ ಭಾರತ ಕ್ರಿಕೆಟ್ ತಂಡದ ಎಫ್ಟಿಪಿ ಬಗ್ಗೆ ಚರ್ಚೆ ನಡೆಯಲಿದೆ.
ಇಂಗ್ಲೆಂಡ್ ಭಾರತದಲ್ಲಿ ಒಟ್ಟು ಆರು ಪಂದ್ಯಗಳನ್ನು ಸೆಪ್ಟಂಬರ್ ನಲ್ಲಿ ಆಡಬೇಕಿತ್ತು. ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಳ್ಳುತ್ತಿಲ್ಲ ಎಂದು ಬಿಸಿಸಿಐನ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಮಾರ್ಚ್ ನಂತರ ಟೀಮ್ ಇಂಡಿಯಾ ಆಟಗಾರರು ಮೈದಾನಕ್ಕೆ ಇಳಿದಿಲ್ಲ. ಮನೆಯಲ್ಲೇ ಲಾಕ್ ಆಗಿದ್ದಾರೆ. ಒಂದು ವೇಳೆ ಮತ್ತೆ ಅವರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾದ್ರೆ ಕನಿಷ್ಠ ಆರು ವಾರಗಳ ಅಭ್ಯಾಸ ನಡೆಸಬೇಕಾಗುತ್ತದೆ. ಆದ್ರೆ ಸದ್ಯದ ಭಾರತದಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವುದರಿಂದ ತರಬೇತಿ ಶಿಬಿರ ನಡೆಸಲು ಕನಿಷ್ಠ ಅಂದ್ರೂ ಮೂರು ತಿಂಗಳಾದ್ರೂ ಬೇಕಾಗುತ್ತದೆ.








