ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್- ಟೀಮ್ ಇಂಡಿಯಾದ ಫೈನಲ್ ಹಾದಿ ಹೇಗಿತ್ತು…!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ ಜೂನ್ 18ರಿಂದ ಸೌತಾಂಪ್ಟನ್ ನಲ್ಲಿ ನಡೆಯಲಿದೆ. ಪ್ರತಿಷ್ಠಿತ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಜಿದ್ದಾಜಿದ್ದಿನ ಫೈಟ್ ನಡೆಸಲಿವೆ.
ಹಳೆಯ ಅಂಕಿ ಅಂಶಗಳನ್ನು ತೆಗೆದುಕೊಂಡ್ರೆ ಗೆಲ್ಲುವ ನೆಚ್ಚಿನ ತಂಡ ಟೀಮ್ ಇಂಡಿಯಾ. ಯಾಕಂದ್ರೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಟೀಮ್ ಇಂಡಿಯಾದ ಸಾಧನೆ ಕೂಡ ಆ ಮಟ್ಟದಲ್ಲಿದೆ. ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ವಿರುದ್ಧ ಲೆಕ್ಕಚಾರದಲ್ಲೇ ಗೆಲ್ಲಬೇಕಾದ ಅನಿವಾರ್ಯತೆ ಬಂದ್ರೂ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಟೀಮ್ ಇಂಡಿಯಾದ ಸಾಧನೆ ಅಮೋಘವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಲ್ಲಿ ಟೀಮ್ ಇಂಡಿಯಾ ಒಟ್ಟು 17 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.
2019- ವೆಸ್ಟ್ ಇಂಡೀಸ್ ವಿರುದ್ಧ 2-0ಯಿಂದ ಗೆಲುವು
2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಮೊದಲ ಪಂದ್ಯವನ್ನು 318 ರನ್ ಗಳಿಂದ ಗೆದ್ರೆ, ಎರಡನೇ ಟೆಸ್ಟ್ ಪಂದ್ಯವನ್ನು 257 ರನ್ ಗಳಿಂದ ಗೆಲುವಿನ ನಗೆ ಬೀರಿತ್ತು.
2019- ದಕ್ಷಿಣ ಆಫ್ರಿಕಾ ವಿರುದ್ಧ 3-0 ಯಿಂದ ಗೆಲುವು..!
ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಅಡಿತ್ತು. ಮೊದಲ ಪಂದ್ಯವನ್ನು 203 ರನ್ ಗಳಿಂದ ಗೆದ್ರೆ, ಎರಡನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 137 ರನ್ ಗಳಿಂದ ಜಯ ಸಾಧಿಸಿತ್ತು. ಹಾಗೇ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರಹಾನೆ ಅವರ ಶತಕಗಳ ಸಹಾಯದಿಂದ ಸರಣಿಯನ್ನು ಕ್ಲೀನ್ 3-0ಯಿಂದ ಸ್ವೀಪ್ ಮಾಡಿಕೊಂಡಿತ್ತು.
ಬಾಂಗ್ಲಾದೇಶ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಗೆಲುವು
ದಕ್ಷಿಣ ಆಫ್ರಿಕಾ ಸರಣಿಯ ನಂತರ ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು. ಈ ಐತಿಹಾಸಿಕ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 130 ರನ್ ಗಳಿಂದ ಗೆಲುವು ಸಾಧಿಸಿತ್ತು. ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಅವರ ಮಾರಕ ದಾಳಿಯಿಂದಾಗಿ ಬಾಂಗ್ಲಾ ದೇಶ ಸೋಲು ಅನುಭವಿಸಿತ್ತು. ಟೀಮ್ ಇಂಡಿಯಾ ಸರಣಿಯನ್ನು 2-0ಯಿಂದ ಗೆದ್ದುಕೊಂಡಿತ್ತು.
ನ್ಯೂಜಿಲೆಂಡ್ ವಿರುದ್ಧ 0-2ರಿಂದ ಸೋತು ಹೋದ ಟೀಮ್ ಇಂಡಿಯಾ
ಸತತ ಗೆಲುವಿನ ಅಲೆಯಲ್ಲಿ ತೇಲಾಡುತ್ತಿದ್ದ ಟೀಮ್ ಇಂಡಿಯಾಗೆ ಶಾಕ್ ನೀಡಿದ್ದು ನ್ಯೂಜಿಲೆಂಡ್. ಎರಡು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿಯೇ ಸೋತಿತ್ತು. ಮೊದಲ ಪಂದ್ಯವನ್ನು ಹತ್ತು ವಿಕೆಟ್ ಗಳಿಂದ ಸೋತ್ರೆ, ಎರಡನೇ ಪಂದ್ಯದಲ್ಲೂ ಕೈಲ್ ಜಾಮಿನ್ಸನ್ ಅವರ ಮಾರಕ ದಾಳಿಗೆ ಟೀಮ್ ಇಂಡಿಯಾ ಕಂಗೆಟ್ಟು ಪರಾಭವಗೊಂಡಿತ್ತು.
ಆಸ್ಟ್ರೇಲಿಯಾ ವಿರುದ್ಧ 2-1ರಿಂದ ರೋಚಕ ಗೆಲುವು
ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ 36 ರನ್ ಗೆ ಆಲೌಟ್ ಆಗಿ ಸೋಲು ಅನುಭವಿಸಿದ್ದಲ್ಲದೆ ಸಾಕಷ್ಟು ಟೀಕೆಗಳಿಗೂ ಗುರಿಯಾಗಿತ್ತು,
ಆದೆ ಮೆಲ್ಬರ್ನ್ ಮತ್ತು ಗಬ್ಬಾ ಅಂಗಣದಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯಾ ತಂಡಕ್ಕೆ ಅವರದ್ದೇ ನೆಲದಲ್ಲಿ ಸೋಲಿನ ರುಚಿ ತೋರಿಸಿತ್ತು.
ಇಂಗ್ಲೆಂಡ್ ವಿರುದ್ದ ತವರಿನಲ್ಲಿ 3-1ರಿಂದ ಗೆಲುವು
2021ರಲ್ಲಿ ತವರಿನಲ್ಲಿ ನಡೆದಿದ್ದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 3-1ರಿಂದ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿತ್ತು. ಚೆನ್ನೈ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಸೋತ್ರೂ ಕೂಡ ನಂತರದ ಮೂರು ಪಂದ್ಯಗಳನ್ನು ಗೆದ್ದುಕೊಂಡು ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಗೆ ಅರ್ಹತೆಯನ್ನು ಪಡೆದುಕೊಂಡಿತ್ತು.
ಒಟ್ಟಾರೆಯಾಗಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 2-0, ದಕ್ಷಿಣ ಆಫ್ರಿಕಾ ವಿರುದ್ಧ 3-0, ಬಾಂಗ್ಲಾ ದೇಶ ವಿರುದ್ಧ 2-0, ಆಸ್ಟ್ರೇಲಿಯಾ ವಿರುದ್ಧ 2-1, ಇಂಗ್ಲೆಂಡ್ ವಿರುದ್ಧ 3-1ರಿಂದ ಗೆದ್ರೆ ನ್ಯೂಜಿಲೆಂಡ್ ವಿರುದ್ಧ ಮಾತ್ರ 0-2ರಿಂದ ಸೋಲು ಅನುಭವಿಸಿದೆ.
ಇದೀಗ ಮತ್ತೆ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಫೈನಲ್ ನಲ್ಲಿ ಹೋರಾಟ ನಡೆಸಲಿದೆ. ಗೆಲುವು ಯಾರದ್ದು ಅನ್ನೋದನ್ನು ಕಾದು ನೋಡಬೇಕು.