ಗೌತಮ್ ಗಂಭೀರ್.. ಬಹುಶಃ ಆತ ಬಿಜೆಪಿಯ ಮಾಜಿ ಸಂಸದನಾಗದೇ ಇರುತ್ತಿದ್ರೆ ಆತನ ವಿರುದ್ಧ ಟೀಕೆಗಳು ಬರುತ್ತಿರಲಿಲ್ಲವೇನೋ..!? ಹಾಗೇ ರೋಹಿತ್ – ವಿರಾಟ್ ಜೊತೆ ಉತ್ತಮ ಒಡನಾಡವಿರುತ್ತಿದ್ರೆ ಆತನನ್ನು ಯಾರು ಕೂಡ ಪ್ರಶ್ನೆ ಮಾಡುತ್ತಿರಲಿಲ್ಲ ಅನಿಸುತ್ತೆ..!
ಹಾಗೇ ನೋಡಿದ್ರೆ ಭಾರತ ಕ್ರಿಕೆಟ್ ತಂಡ ಕಳಪೆ ಪ್ರದರ್ಶನ ನೀಡಿದಾಗಲೆಲ್ಲಾ ಮೊದಲು ಬಲಿಯಾಗಿದ್ದು ಹೆಡ್ ಕೋಚ್‍ಗಳೇ.. ಯಾವಾಗ ಹೆಡ್‍ಕೋಚ್‍ಗಳು ಹೆಡ್ ಮಾಸ್ಟರ್ ರೀತಿಯಲ್ಲಿ ವರ್ತಿಸಿದಾಗ ಸೀನಿಯರ್ ಪ್ಲೇಯರ್ ಗಳು ಅಸಮಾಧಾನಗೊಳ್ಳುವುದು ಕೂಡ ಸಹಜ. ಸದ್ಯ ಟೀಮ್ ಇಂಡಿಯಾದಲ್ಲಿ ಆಗುತ್ತಿರುವುದು ಕೂಡ ಅದೇ. ಯಾಕಂದ್ರೆ ತಂಡದ ಸೀನಿಯರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೆಡ್ ಕೋಚ್ ಜೊತೆ ಆಡಿದ್ದಾರೆ. ಅಷ್ಟೇ ಅಲ್ಲ ಗೌತಮ್ ಗಂಭೀರ್ ಗಿಂತಲೂ ಉತ್ತಮ ಸಾಧನೆ, ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಗೌತಮ್ ಗಂಭೀರ್ ನಮಗೆ ಏನು ಸಲಹೆ, ಮಾರ್ಗದರ್ಶನ ನೀಡುವುದು ಎಂಬ ಭಾವನೆ ಮೂಡುವುದು ಸಹಜವೇ. ಗಂಭೀರ್ ಗೆ ತಾನು ಹೆಡ್‍ಕೋಚ್ ಎಂಬ ಅಹಂ ಇದ್ರೆ, ವಿರಾಟ್ ಮತ್ತು ರೋಹಿತ್‍ಗೆ ಸೀನಿಯರ್ ಪ್ಲೇಯರ್ಸ್ ಎಂಬ ಟ್ಯಾಗ್ ಲೈನ್ ಇದೆ. ಇದು ಇಡೀ ತಂಡದ ಅಧಃಪತನಕ್ಕೆ ಕಾರಣವಾಗುತ್ತಿದೆ.
ಹೌದು, 2000ದಲ್ಲಿ ಭಾರತೀಯ ಕ್ರಿಕೆಟ್‍ನಲ್ಲಿ ಮ್ಯಾಚ್ ಫಿಕ್ಸಿಂಗ್ ಭೂತದಿಂದ ಹೊರಬರಲು ವಿದೇಶಿ ಕೋಚ್‍ಗಳ ಮೊರೆ ಹೋಗಿದ್ದು ಈಗ ಇತಿಹಾಸ. ಆದ್ರೆ ಮ್ಯಾಚ್ ಫಿಕ್ಸಿಂಗ್ ಕಳಂಕ ಹೊತ್ತವರ್ಯಾರಿಗೂ ಶಿಕ್ಷೆಯಾಗಿಲ್ಲ. ಶಿಕ್ಷೆಯಾದ್ರೂ ಕಳಂಕ ಹೊತ್ತವರು ಕಾನೂನು ಸಮರ ಮಾಡಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಕ್ಲೀನ್ ಆಗಿ ಹೊರಬಂದಿದ್ದಾರೆ. ಆದ್ರೆ ಇಂದಿಗೂ ತನಿಖೆ ಮಾಡಿದ ಸಂಸ್ಥೆಯ ಅಧಿಕಾರಿಗಳು ಕೆಲವು ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಮಾತಿಗೆ ಬದ್ಧವಾಗಿದ್ದಾರೆ. ಆದ್ರೆ ತಾಂತ್ರಿಕ ಕಾರಣಗಳಿಂದ ಮ್ಯಾಚ್ ಫಿಕ್ಸಿಂಗ್ ಮಾಡಿರೋದು ಪ್ರೂವ್ ಮಾಡೋಕೆ ಆಗಿಲ್ಲ ಎಂಬುದು ಮಾತ್ರ ದುರಂತ.
ಹಾಗೇ ನೋಡಿದ್ರೆ, ಟೀಮ್ ಇಂಡಿಯಾದ ಮೊದಲ ವಿದೇಶಿ ಕೋಚ್ ಜಾನ್ ರೈಟ್ ರಿಂದ ಹಿಡಿದು, ಗ್ರೇಗ್ ಚಾಪೆಲ್ , ಡಂಕನ್ ಫ್ಲೇಚರ್ ತನಕ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯ ಟೀಕೆಗಳು ಕೇಳಿ ಬಂದಿದ್ದವು. ಅದರಲ್ಲೂ ಯಂಗ್ ಟೀಮ್ ಇಂಡಿಯಾ ಕಟ್ಟಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಿದ್ದ ಗ್ರೇಗ್ ಚಾಪೆಲ್ ಗೆ ರಿಂಗ್ ಮಾಸ್ಟರ್ ಎಂಬ ಕುಖ್ಯಾತಿ ಅಂಟಿಕೊಂಡಿತ್ತು. ಆದ್ರೆ ವಿದೇಶಿ ಕೋಚ್ ಗಳ ಪೈಕಿ ಜಾನ್ ರೈಟ್ ಮತ್ತು ಗ್ಯಾರಿ ಕಸ್ಟರ್ನ್ ಸೀನಿಯರ್ ಮತ್ತು ಜೂನಿಯರ್ ಆಟಗಾರರನ್ನು ಒಂದೇ ತಕ್ಕಡಿಯಲ್ಲಿಟ್ಟುಕೊಂಡು ಮುನ್ನಡೆಸಿರುವುದರಿಂದ ತಂಡಕ್ಕೆ ಹೆಚ್ಚು ಹಾನಿಯಾಗಿಲ್ಲ. ಜಾನ್ ರೈಟ್ ನ್ಯೂ ಟೀಮ್ ಇಂಡಿಯಾಗೆ ಬುನಾದಿ ಹಾಕಿಕೊಟ್ರೆ, ಗ್ಯಾರಿ ಕಸ್ಟರ್ನ್ ಎಚ್ಚರಿಕೆಯ ಹೆಜ್ಜೆಯನ್ನಿಟ್ಟುಕೊಂಡು ಮುನ್ನಡೆದ್ರು. ಬಳಿಕ ಡಂಕನ್ ಫ್ಲೆಚರ್ ಕೂಡ ಯಂಗ್ ಟೀಮ್ ಇಂಡಿಯಾವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಈ ನಡುವೆ, ರವಿಶಾಸ್ತ್ರಿ ಮತ್ತು ಲಾಲ್‍ಚಾಂದ್ ರಜಪೂತ್ ಅರೆಕಾಲಿಕ ಕೋಚ್ ಆಗಿ ಟೀಮ್ ಇಂಡಿಂಯಾಗೆ ಅಚ್ಚರಿಯ ಫಲಿತಾಂಶವನ್ನು ನೀಡಿದ್ದರು.
ಇನ್ನೊಂದೆಡೆ ಅನಿಲ್ ಕುಂಬ್ಳೆ ಹೆಡ್ ಕೋಚ್ ಆಗಿದ್ದಾಗ ಟೀಮ್ ಇಂಡಿಯಾ ಯಶ ಸಾಧಿಸಿದ್ರೂ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಹೀಗಾಗಿಯೇ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯನ್ನೇ ತ್ಯಾಗ ಮಾಡಬೇಕಾಯ್ತು.
ಆದ್ರೆ ಚತುರ ರವಿಶಾಸ್ತ್ರಿಗೆ ಮ್ಯಾನ್ ಮ್ಯಾನೇಜ್‍ಮೆಂಟ್ ಚೆನ್ನಾಗಿ ಗೊತ್ತಿತ್ತು. ಅಲ್ಲದೆ ವಿರಾಟ್ ಕೊಹ್ಲಿಯ ಫಾರ್ಮ್ ಕೂಡ ಪ್ಲಸ್ ಪಾಯಿಂಟ್ ಆಗಿತ್ತು. ಹಾಗೇ ನೀಲಿಗಣ್ಣಿನ ಹುಡುಗ ಕೊಹ್ಲಿ ಮತ್ತು ರೋಹಿತ್ ನಡುವಿನ ಮನಸ್ತಾಪಕ್ಕೆ ಬ್ರೇಕ್ ಹಾಕಿದ್ದ ರವಿಶಾಸ್ತ್ರಿ ತಂತ್ರಗಾರಿಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು.
ಆದ್ರೆ ರವಿಶಾಸ್ತ್ರಿ ಬಳಿಕ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದಾಗ ಸೌರವ್ ಗಂಗೂಲಿ ಮೊದಲು ಮಾಡಿದ್ದ ಕೆಲಸವೇ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು. ತಾಳ್ಮೆಯ ಪ್ರತೀಕ ದ್ರಾವಿಡ್ ಮತ್ತು ಆಕ್ರಮಣಕಾರಿ ಪ್ರವೃತ್ತಿಯ ಕೊಹ್ಲಿ ಜೊಡೆತ್ತಿನ ರೀತಿಯಲ್ಲಿ ಕೆಲಸ ಮಾಡ್ತಾರೆ ಅಂತ ನಂಬಿಕೆ ಇಲ್ಲ. ಹೀಗಾಗಿಯೇ ಸೌರವ್ ಗಂಗೂಲಿ ಆದೇಶದ ಮೇರೆಗೆ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ನಾಯಕನಾಗಿದ್ದರು. ಅಲ್ಲದೆ ರೋಹಿತ್‍ಗೂ ಒಂದು ರೀತಿಯ ಪ್ರೀತಿ ಇತ್ತು. ದ್ರಾವಿಡ್ ನಾಯಕತ್ವದಲ್ಲೇ ತಾನು ಟೀಮ್ ಇಂಡಿಯಾಗೆ ಎಂಟ್ರಿಯಾಗಿದ್ದು ಎಂಬ ಮಮತೆ ಇತ್ತು. ಹೀಗಾಗಿಯೇ ರೋಹಿತ್ ಮತ್ತು ದ್ರಾವಿಡ್ ಕಾಂಬಿನೇಷನ್ ಯಶಸ್ವಿಯಾಗಿ ವರ್ಕ್ ಔಟ್ ಆಯ್ತು.
ಆದ್ರೆ ಗಂಭೀರ್ ಗೆ ಹಾಗಿಲ್ಲ. ರೋಹಿತ್ ಮತ್ತು ಕೊಹ್ಲಿ ಜೊತೆಗೆ ಆಡಿದ್ರು. ಅಲ್ಲದೆ ಕೊಹ್ಲಿ ಜೊತೆ ಎರಡು ಮೂರು ಬಾರಿ ಜಟಾಪಟಿ ಕೂಡ ನಡೆದಿದೆ. ಹಾಗೇ ಗಂಭೀರ್ ಸಾಧನೆಯನ್ನು ನೋಡಿದ್ರೆ, ರೋಹಿತ್ ಮತ್ತು ಕೊಹ್ಲಿ ಹೆಚ್ಚು ಯಶ ಸಾಧಿಸಿದ್ರು. ಇದ್ರಿಂದ ಗಂಭೀರ್ ಮಾತು ಯಾಕೆ ಕೇಳಬೇಕು ಎಂಬುದು ರೋಕೋ ವಾದವಾದ್ರೆ, ತಾನು ಹೆಡ್ ಕೋಚ್ ತನ್ನ ಮಾತೇ ಅಂತಿಮ ಎಂಬುದು ಗಂಭೀರ್ ಪ್ರತಿವಾದವಾಗಿದೆ.
ಇನ್ನೊಂದೆಡೆ ಭವಿಷ್ಯದ ಟೀಮ್ ಇಂಡಿಯಾದ ದೃಷ್ಟಿಯಿಂದ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬುದು ಗಂಭೀರ್ ಯೋಚನೆ ಆಗಿರುತ್ತದೆ. ಭವಿಷ್ಯದ ತಂಡ ಕಟ್ಟಬೇಕಾಗಿರುವುದರಿಂದ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದೂ ಅಲ್ಲದೆ ಈ ಹಿಂದೆ ಬಿಸಿಸಿಐ ಹಾಗೂ ಆಯ್ಕೆ ಸಮಿತಿ ಕಠಿಣ ನಿರ್ಧಾರವನ್ನೇ ತೆಗೆದುಕೊಂಡಿದೆ. ಸೆಹ್ವಾಗ್, ಗಂಭೀರ್, ಗಂಗೂಲಿ, ಕುಂಬ್ಳೆ, ಸಚಿನ್, ರಾಹುಲ್ ದ್ರಾವಿಡ್, ಜಹೀರ್ ಖಾನ್, ಇರ್ಫಾನ್ ಪಠಾನ್, ಲಕ್ಷಣ್ ಸೇರಿದಂತೆ ಅನೇಕ ಆಟಗಾರರಿಗೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಗೇಟ್ ಪಾಸ್ ನೀಡಿರುವುದನ್ನು ಯಾರೂ ಮರೆತಿಲ್ಲ.
ಆದ್ರೆ ಆಗ ಪರಿಸ್ಥಿತಿ ಬೇರೆನೇ ಇತ್ತು. ಹಿರಿಯ ಆಟಗಾರರು ತೆರೆಮರೆಗೆ ಸರಿದಾಗ ಯುವ ಆಟಗಾರರು ಆ ಜವಾಬ್ದಾರಿಯನ್ನು ನಿಭಾಯಿಸಲು ರೆಡಿಯಾಗಿದ್ದರು. ಗವಾಸ್ಕರ್ ನಂತರ ಸಚಿನ್, ಸಚಿನ್ ನಂತರ ಕೊಹ್ಲಿ ಹೀಗೆ ಅದ್ಭುತ ಆಟಗಾರರಿಗೆ ಇನ್ನೊಬ್ಬ ಬ್ಯಾಕ್ ಅಪ್ ಆಟಗಾರ ರೆಡಿಯಾಗಿದ್ದ. ಆಗ ಯಾವುದೇ ಸಮಸ್ಯೆ ಇರಲಿಲ್ಲ.
ಆದ್ರೆ ಈಗ ಸಮಸ್ಯೆ ಎದುರಾಗಿದ್ದು ಟೆಸ್ಟ್ ತಂಡಕ್ಕೆ ಮಾತ್ರ. ಏಕದಿನ ಮತ್ತು ಟಿ-20 ಕ್ರಿಕೆಟ್‍ನಲ್ಲಿ ಭಾರತ ತಂಡ ಬಲಿಷ್ಠವಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಆದ್ರೂ ಕೆಲವೊಂದು ಆಯ್ಕೆಗಳಲ್ಲಿ ಆಯ್ಕೆ ಸಮಿತಿ ಮತ್ತು ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಎಡವಿರುವುದು ಸ್ಪಷ್ಟವಾಗಿದೆ. ಕೇವಲ ಐಪಿಎಲ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಇಡೀ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.
ಹೌದು, ಸದ್ಯ ಭಾರತದಲ್ಲಿ ಟೆಸ್ಟ್ ತಂಡದ ಕ್ವಾಲಿಟಿ ಕಡಿಮೆಯಾಗುತ್ತಿದೆ. ಯುವ ಆಟಗಾರರಲ್ಲಿ ತಾಳ್ಮೆಯೇ ಇಲ್ಲ. ಹೊಡಿಬಡಿ ಆಟ. ಪಂದ್ಯ ಮೂರು ನಾಲ್ಕು ದಿನಗಳಲ್ಲಿ ಮುಗಿಯಬೇಕು ಎಂಬ ತುಡಿತ. ಈ ಕಾರಣದಿಂದಲೇ ಭಾರತದಲ್ಲಿ ಟೆಸ್ಟ್ ಪಂದ್ಯದ ಮೌಲ್ಯಗಳು ಕಡಿಮೆಯಾಗುತ್ತಿವೆ.
ಒಟ್ಟಿನಲ್ಲಿ ಇಲ್ಲಿ ಯಾರನ್ನೂ ದೂಷಣೆ ಮಾಡುವುದು ಸರಿಯಲ್ಲ. ಆದ್ರೂ ಗಂಭೀರ್, ಮಹಮ್ಮದ್ ಸಮಿ ಮತ್ತು ಮಹಮ್ಮದ್ ಸಿರಾಜ್ ಅವರನ್ನು ಕಡಗಣನೆ ಮಾಡುತ್ತಿರುವುದು ಟೀಕೆಗೆ ಪ್ರಮುಖ ಕಾರಣವಾಗಿದೆ.
ಏನೇ ಆದ್ರೂ ಯಾವ ಭಾರತೀಯ ಕೋಚ್ ಕೂಡ ಟೀಮ್ ಇಂಡಿಯಾವನ್ನು ಹಾಳು ಮಾಡಬೇಕು, ನಾಶ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿರುವುದಿಲ್ಲ. ಆದ್ರೆ ಸೀನಿಯರ್ ಆಟಗಾರರು ತಮ್ಮ ಮಾತಿಗೆ ಬೆಲೆ ಕೊಡದೆ ಇದ್ದಾಗ ಕೋಚ್ ಸಿಟ್ಟು ಆಗೋದು ಸಹಜ. ಅದೇ ಈಗ ಆಗುತ್ತಿರುವುದು. ಯಾಕಂದ್ರೆ, ನಾಯಕನಾಗಿ ಕೊಹ್ಲಿ, ರೋಹಿತ್ ತಮಗೆ ಬೇಕಾದ ತಂಡವನ್ನು ಆಯ್ಕೆ ಮಾಡಿಕೊಂಡಾಗ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಯಾಕಂದ್ರೆ ಆಗ ತಂಡದ ಅದೃಷ್ಟ, ಫಲಿತಾಂಶ ಬರುತ್ತಿತ್ತು. ಈಗ ಫಲಿತಾಂಶ, ಪ್ರದರ್ಶನ ಬರುತ್ತಿಲ್ಲ. ಸೀನಿಯರ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ರೂ ತಂಡದಲ್ಲಿ ಒಗ್ಗಟ್ಟಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಒಂದು ನೆನಪಿಟ್ಟುಕೊಳ್ಳಲೇಬೇಕು. ಟೀಮ್ ಇಂಡಿಯಾಗೆ ಯಾರೂ ಅನಿವಾರ್ಯ ಅಲ್ಲ. ಇಲ್ಲಿ ವ್ಯಕ್ತಿಗಿಂತ ತಂಡ ಮುಖ್ಯ. ಗಂಭೀರ್ ಹೆಡ್ ಕೋಚ್ ಆಗಿರಬಹುದು.. ವಿರಾಟ್ ಕೊಹ್ಲಿ ದಾಖಲೆ ವೀರನಾಗಿರಬಹುದು.. ರೋಹಿತ್ ಪಂಟರ್ ಆಗಿರಬಹುದು.. ಆದ್ರೆ ಭಾರತೀಯ ಅಭಿಮಾನಿಗಳಿಗೆ ಟೀಮ್ ಇಂಡಿಯಾವೇ ಮುಖ್ಯ ಹೊರತು, ವ್ಯಕ್ತಿಗತ ಆಟಗಾರರಲ್ಲ. ಇದನ್ನು ಈ ಮೂವರು ಅರ್ಥ ಮಾಡಿಕೊಂಡ್ರೆ ಟೀಮ್ ಇಂಡಿಯಾದ ಭವಿಷ್ಯ ಉಜ್ಜಲವಾಗಬಹುದು. ಇಲ್ಲಿ ಎಷ್ಟೇ ಮನಸ್ತಾಪಗಳಿದ್ರೂ ಅದು ಅವರ ವೈಯಕ್ತಿಕ ವಿಚಾರ. ಟೀಮ್ ಇಂಡಿಯಾದ ಮೇಲೆ ಪರಿಣಾಮ ಬೀರೋದು ಬೇಡ. ಹಲವು ಆಟಗಾರರ ಬೆವರಿನ ಹನಿ, ಹಲವು ನಾಯಕರ ದೂರದೃಷ್ಟಿ, ಹಲವು ಕೋಚ್‍ಗಳ ಪರಿಶ್ರಮವನ್ನು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಅಭಿಮಾನವನ್ನು ಯಾರದ್ದೋ ವೈಯಕ್ತಿಕ ಕಾರಣಕ್ಕೆ ಇಡೀ ತಂಡವನ್ನು ಮನೆಯೊಂದು ಮೂರು ಬಾಗಿಲು ಮಾಡೋದು ಬೇಡ ಅಷ್ಟೇ.
ಸನತ್ ರೈ








