ಮುಂಬೈ, ಜೂನ್ 3 : ‘ ಇಲ್ಲಿರುವ ಸೋಂಕಿತರು ಯಾವುದೇ ಸಮಯದಲ್ಲಿ ಸಾಯಬಹುದಾಗಿದೆ. ನನ್ನ ಕಣ್ಣೆದುರು ವ್ಯಕ್ತಿಯೊಬ್ಬ ಸಾಯುವುದನ್ನು ನನಗೆ ನೋಡಲಾಗುತ್ತಿಲ್ಲ ಆದರೆ ಏನೂ ಮಾಡಲಾಗದೆ ನಾನು ಅಸಹಾಯಕನಾಗಿದ್ದೇನೆ’. ಇದು ಮುಂಬೈನ ಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ) ಆಸ್ಪತ್ರೆಯ ವೈದ್ಯರೊಬ್ಬರ ಮಾತು.
ಕೊರೋನಾ ಸೋಂಕಿನಿಂದ ಕಂಗೆಟ್ಟಿರುವ ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 72 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, ದಿನೇ ದಿನೇ ಪ್ರಕರಣಗಳು ಏರುಗತಿಯಲ್ಲಿ ಹೆಚ್ಚುತ್ತಿದೆ
ಆಸ್ಪತ್ರೆಗಳ ಸಾಮರ್ಥ್ಯಕ್ಕಿಂತಲೂ ಹೆಚ್ಚು ಬೆಡ್ ಗಳ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದರೂ, ಬೆಡ್ ಸಮಸ್ಯೆ ಕಾಡುತ್ತಿದೆ. ಇದರೊಡನೆ ಗಡಿಯಾರದ ಮುಳ್ಳಿನಂತೆ 24 ಗಂಟೆ ಅವಿರತ ಸೇವೆ ಮಾಡಿ ದಣಿದಿರುವ ವೈದ್ಯಕೀಯ ಸಿಬ್ಬಂದಿಗಳು ಅತಿಯಾದ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ಜಗತ್ತಿನ ಪ್ರಮುಖ ನಗರವಾಗಿ ಗುರುತಿಸಿಕೊಂಡಿರುವ ಭಾರತದ ವಾಣಿಜ್ಯ ನಗರ ಮುಂಬೈನಲ್ಲಿ 41 ಸಾವಿರ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಅತಿಯಾದ ಕೆಲಸದ ಒತ್ತಡದಿಂದ ಬಳಲುತ್ತಿರುವ ಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ) ಆಸ್ಪತ್ರೆಯ ವೈದ್ಯಕೀಯ ಸಂಘದವರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಮಹಾರಾಷ್ಟ್ರ ಮುಖ್ಯಮುಂತ್ರಿ ಉದ್ದವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಕೊರೊನಾ ವೈರಸ್ ಪರೀಕ್ಷಿಸುವ ವೈದ್ಯಕೀಯ ಸಿಬ್ಬಂದಿಗೆ ಕಡಿಮೆ ಅವಧಿಯ ಪಾಳಿ ಮತ್ತು ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಕೆಇಎಂ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ಗಳು ಮತ್ತು ನಾಲ್ಕನೇ ದರ್ಜೆ ಸಿಬ್ಬಂದಿ ಕೊರತೆ ಇದ್ದು, ಇದು ವೈದ್ಯರಿಗೆ ಹೊರೆಯಾಗಿ ಅವರ ಸ್ಥೈರ್ಯದ ಮೇಲೆ ಪರಿಣಾಮ ಉಂಟುಮಾಡುತ್ತಿದೆ ಎಂದು ವಿವರಿಸಿದ್ದಾರೆ. ಕೆಇಎಂ ಆಸ್ಪತ್ರೆಯ ವೈದ್ಯಕೀಯ ಸಂಘದವರು ಪತ್ರದ ಜೊತೆಗೆ ವೀಡಿಯೋವನ್ನು ಹಂಚಿಕೊಂಡಿದ್ದು, ಆ ವೀಡಿಯೋ ದಲ್ಲಿ ವಾರ್ಡ್ ನಲ್ಲಿರುವ 35 ಸೋಂಕಿತರನ್ನು ಕೇವಲ ಮೂವರು ವೈದ್ಯರು ನೋಡಿಕೊಳ್ಳುತ್ತಿರುವುದು ಸೆರೆಯಾಗಿದೆ.
ವೈದ್ಯರೊಬ್ಬರು ಇದು ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳ ದುಸ್ಥಿತಿ. ಭಾರತವು ಆರೋಗ್ಯಕ್ಕಾಗಿ ತನ್ನ ಜಿಡಿಪಿಯಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ವ್ಯಯಿಸುತ್ತಿದೆ ಎಂದು ಹೇಳಿದ್ದು, ವಾರ್ಡ್ ಸ್ವಚ್ಛಗೊಳಿಸಲು ಒಬ್ಬ ಸಿಬ್ಬಂದಿಯೂ ಇಲ್ಲ, ಸೋಂಕಿತರನ್ನು ನೋಡಿಕೊಳ್ಳಲು ನರ್ಸ್ಗಳಿಲ್ಲ ಎಂದು ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಸೋಂಕಿತನೊಬ್ಬನನ್ನು ತೋರಿಸಿ ಈತ ಅನಾರೋಗ್ಯದಿಂದ ಬಳಲುತ್ತಿದ್ದು ನಾನು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇನೆ. ನನ್ನ ಕಣ್ಣೆದುರು ವ್ಯಕ್ತಿಯೊಬ್ಬ ಸಾಯುವುದನ್ನು ನನಗೆ ನೋಡಲಾಗುತ್ತಿಲ್ಲ ಆದರೆ ಏನೂ ಮಾಡಲಾಗದೆ ನಾನು ಅಸಹಾಯಕನಾಗಿದ್ದೇನೆ.
ಇಲ್ಲಿರುವ 35 ಮಂದಿ ಸೋಂಕಿತರು ಯಾವುದೇ ಸಮಯದಲ್ಲಿ ಸಾಯಬಹುದಾಗಿದೆ ಆದರೆ ಇಲ್ಲಿರುವುದು ನಾವು ಮೂವರು ವೈದ್ಯರು ಮಾತ್ರ. ಸರಿಯಾಗಿ ವ್ಯವಸ್ಥೆಯಿಲ್ಲದೇ ನಾವು ಭರವಸೆಗಳನ್ನು ಕಳೆದು ಕೊಂಡಿದ್ದೇವೆ. ಆದ್ದರಿಂದ ಯುವಜನರಲ್ಲಿ ನಮಗೆ ಬಂದು ನೆರವಾಗುವಂತೆ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ. ನಾವು ಈಗಾಗಲೇ ಉನ್ನತ ಅಧಿಕಾರಿಗಳೊಂದಿಗೆ ಈ ವಿಚಾರ ಚರ್ಚಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಈಗಲೂ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳು ಭೀಕರವಾಗಿರಲಿದೆ ಎಂದು ಭಯ ವ್ಯಕ್ತಪಡಿಸಿದ್ದಾರೆ.








