ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ vs ಕಾಂಗ್ರೆಸ್ Saaksha Tv
ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ 2014ರಿಂದ ಮಾತ್ರ ದೇಶ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಿತು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ
ಬುಧವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು ಭಾರತವು 1947 ರಲ್ಲಿ ಸ್ವತಂತ್ರಗೊಂಡಿರಬಹುದು ಆದರೆ ದೇಶವು 2014ರ ನಂತರದಿಂದ ಆರ್ಥಿಕವಾಗಿ ಸದೃಢವಾಗಿದೆ. ಆಧುನಿಕ ಭಾರತೀಯ ಇತಿಹಾಸವನ್ನು “ಮೋದಿ ಪೂರ್ವ ಮತ್ತು ನಂತರದ ಯುಗ” ಎಂದು ವಿಂಗಡಿಸಬಹುದಾಗಿದೆ ಎಂದು ಹೇಳಿದರು.
ರಾಜವಂಶ ಕಾಂಗ್ರೆಸ್ ಪಕ್ಷದ ಯುವರಾಜರು ತಮ್ಮ ರಾಜಕೀಯ ನಿರುದ್ಯೋಗವನ್ನು ದೇಶದ ನಿರುದ್ಯೋಗ ಎಂದು ಗೊಂದಲಗೊಳಿಸುತ್ತಿದ್ದಾರೆ ಎಂದು ಮೋದಿ ಸರ್ಕಾರದ ಆಡಳಿತದಲ್ಲಿ ಬೆಳೆಯುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತು ಕಾಂಗ್ರೆಸ್ ಪಕ್ಷದ ವಾದಕ್ಕೆ ಟಾಂಗ್ ಕೊಟ್ಟರು.
ಅಲ್ಲದೇ ಕಳೆದ 70 ವರ್ಷಗಳ ಕಾಲ ಅಧಿಕಾರ ನಡೆಸಿರುವ ನೀವೂ, ಕೇವಲ ಭ್ರಷ್ಟಾಚಾರದೊಂದಿಗೆ ಆಡಳಿತ ನಡೆಸಿದ್ದೀರಿ. ನಿಮ್ಮ ಕಾಲದಲ್ಲಿ ಸಾಮಾನ್ಯ ಜನರು ಬ್ಯಾಂಕ್ಗಳಲ್ಲಿ ಅಕೌಂಟ್ ಓಪನ್ ಮಾಡಲು ತೊಂದರೆ ಪಡುವಂತಾಗಿತ್ತು. ಆದರೆ, ಇದೀಗ ಜನ್ ಧನ್ ಖಾತೆಯಿಂದ ದೇಶದ ಪ್ರತಿಯೊಬ್ಬರು ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದಾರೆ ಎಂದರು.









