ಕಟ್ಟಡದಿಂದ ಜಿಗಿದು ಮಗುವಿನೊಂದಿಗೆ ಟೆಕ್ಕಿ ಆತ್ಮಹತ್ಯೆ – ಟ್ವಿಸ್ಟ್ ನೀಡಿದ ಮರಣೋತ್ತರ ವರದಿ
ಗುಂಟೂರು, ಸೆಪ್ಟೆಂಬರ್03: ಆಂಧ್ರ ಪ್ರದೇಶದ ಗುಂಟೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಎನ್ ಮನೋಜ್ಞ (29) ಮತ್ತು ಅವರ 9 ತಿಂಗಳ ಮಗು ತುಳಸಿ ಶನಿವಾರ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಹಿಳೆಯ ಕುಟುಂಬವು ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದರು. ಇದೀಗ ಶವಪರೀಕ್ಷೆಯ ವರದಿಗಳು ಹೊರಬಂದಿದ್ದು, ಶವಪರೀಕ್ಷೆಯ 36 ರಿಂದ 48 ಗಂಟೆಗಳ ಮುನ್ನ ತಲೆಗೆ ಆದ ಗಂಭೀರ ಗಾಯದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗುಂಟೂರಿನ ಐದು ಅಂತಸ್ತಿನ ಕಟ್ಟಡದ ಟೆರೇಸ್ನಿಂದ ಮನೋಜ್ಞ ಶನಿವಾರ ತನ್ನ 9 ತಿಂಗಳ ಮಗುವನ್ನು ಎಸೆದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಮನೋಜ್ಞ ಕುಟುಂಬವು ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿತ್ತು.
ಗುಂಟೂರು ನಗರದ ಲಕ್ಷ್ಮಿಪುರಂನಲ್ಲಿರುವ ಕಮಲೇಶ್ ಗ್ರ್ಯಾಂಡ್ ಅಪಾರ್ಟ್ ಮೆಂಟ್ ನ ನಿವಾಸಿ 29 ವರ್ಷದ ಮನೋಜ್ಞ ಮೊದಲು ತುಳಸಿ ಎಂಬ ಮಗಳನ್ನು ತನ್ನ ಕಟ್ಟಡದ ಟೆರೇಸ್ನಿಂದ ಎಸೆದು ನಂತರ ಐದು ಅಂತಸ್ತಿನ ಜಿಗಿದಿದ್ದಾಳೆ ಎಂದು ಪಟ್ಟಾಭಿಪುರಂ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವೈ ಸತ್ಯನಾರಾಯಣ ತಿಳಿಸಿದ್ದರು.
ಈ ಘಟನೆ ಶನಿವಾರ ರಾತ್ರಿ 8 ಗಂಟೆಗೆ ನಡೆದಿದೆ.
ಮೃತ ಮಹಿಳೆಯ ತಾಯಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ವರದಕ್ಷಿಣೆಗಾಗಿ ಮಗಳಿಗೆ ಅತ್ತೆ ಕಿರುಕುಳ ನೀಡುತ್ತಿದ್ದರು. ಕಟ್ಟಡದಿಂದ ಕೆಳಗೆ ಬಿದ್ದರೂ ಮಗಳ ದೇಹದಲ್ಲಿ ಯಾವುದೇ ರಕ್ತದ ಕಲೆಯೂ ಇರಲಿಲ್ಲ. ಆದ್ದರಿಂದ ನನ್ನ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದರು. ಇದೀಗ ಮರಣೋತ್ತರ ವರದಿಯ ಪ್ರಕಾರ ಮನೋಜ್ಞ ಘಟನೆ ನಡೆಯುವ ಮೊದಲೇ ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪುರಾವೆಗಳನ್ನು ಪರಿಶೀಲಿಸುತ್ತಿದ್ದು ಆದಷ್ಟು ಬೇಗ ಪ್ರಕರಣ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದ್ದಾರೆ.








