ಆಗಸ್ಟ್ 5ರಿಂದ ತೆಲಂಗಾಣದಲ್ಲಿ ಕ್ರೀಡಾಚಟುವಟಿಕೆಗಳಿಗೆ ಗ್ರೀನ್ ಸಿಗ್ನಲ್…!
ಕೋವಿಡ್ 19- ಸೋಂಕಿನಿಂದ ತೆಲಂಗಾಣದಲ್ಲಿ ಸ್ಥಗಿತಗೊಂಡಿದ್ದ ಕ್ರೀಡಾಚಟುವಟಿಕೆಗಳು ಮತ್ತೆ ಶುರುವಾಗಲಿದೆ. ಆಗಸ್ಟ್ 5ರಿಂದ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಆರಂಭಿಸುವಂತೆ ತೆಲಂಗಾಣ ಸರ್ಕಾರದ ಕ್ರೀಡಾ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ತೆಲಂಗಾಣ ಕ್ರೀಡಾ ಸಚಿವ ವಿ. ಶ್ರೀನಿವಾಸ್ ಗೌಡ್ ಸಾರಥ್ಯದಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕ್ರೀಡಾಪಟುಗಳಿಗೆ ಕೆಲವೊಂದು ಷರತ್ತುಗಳೊಂದಿಗೆ ತರಬೇತಿ ಶುರು ಮಾಡಲು ಅನುವು ಮಾಡಿಕೊಡಲಾಗಿದೆ. ಅಲ್ಲದೆ ತೆಲಂಗಾಣ ರಾಜ್ಯದಲ್ಲಿ ಕೆಲವೊಂದು ಟೂರ್ನಿಗಳನ್ನು ಸಂಘಟಿಸಲು ಕೂಡ ಅನುಮತಿ ನೀಡಲಾಗಿದೆ.
ಸಭೆಯಲ್ಲಿ ಹೈದ್ರಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಅಜರುದ್ದೀನ್, ಟೆನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ಆಟಗಾರರಾದ ಸಿಕ್ಕಿ ರೆಡ್ಡಿ, ಸುಮಿತ್ ರೆಡ್ಡಿ, ತೆಲಂಗಾಣ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಜಯೇಶ್ ರಂಜನ್, ತೆಲಂಗಾಣ ಬ್ಯಾಡ್ಮಿಂಟನ್ ಸಂಸ್ಥೆಯ ಉಪಾಧ್ಯಕ್ಷ ವಿ. ಚಾಮುಂಡೇಶ್ಚರನಾಥ್ ಮೊದಲಾದವರು ಭಾಗಿಯಾಗಿದ್ದರು.
ತೆಲಂಗಾಣದಲ್ಲಿ ಹೊಸ ಕ್ರೀಡಾ ನೀತಿಯನ್ನು ಜಾರಿಗೊಳಿಸಲು ಹಿರಿಯ ಕ್ರೀಡಾಪಟುಗಳು, ತರಬೇತುದಾರರು ಸಲಹೆ ಸೂಚನೆಗಳನ್ನು ನೀಡಬೇಕು ಎಂದ ವಿ. ಶ್ರೀನಿವಾಸ್ ಗೌಡ್, ತರಬೇತಿ ಸಮಯದಲ್ಲಿ ಕ್ರೀಡಾಪಟುಗಳು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ತರಬೇತಿ ನಡೆಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಲ್ಲದೆ ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಇನ್ನು ಸರ್ಕಾರದ ಈ ನಿರ್ಧಾರದಿಂದ ಕ್ರೀಡಾಪಟುಗಳು ಫುಲ್ ಖುಷಿಯಾಗಿದ್ದಾರೆ. ಕಳೆದ ನಾಲ್ಕೈದು ತಿಂಗಳುಗಳಿಂದ ಮನೆಯಲ್ಲೇ ಇದ್ದ ಕ್ರೀಡಾಪಟುಗಳು ಈಗ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ.
ಆಗಸ್ಟ್ 5ರಿಂದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧೂ, ಬಿ.ಸಾಯ್ ಪ್ರಣೀತ್ ಸೇರಿದಂತೆ ಗೋಪಿಚಂದ್ ಗರಡಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಸರ್ಕಾರದ ನಿರ್ಧಾರವನ್ನು ಕ್ರೀಡಾಪಟುಗಳು ಸ್ವಾಗತಿಸಿದ್ದಾರೆ.