ಮುಂಬೈ ಮೇಲೆ ಉಗ್ರರ ದಾಳಿ – ಕರಾಚಿಯಿಂದ ಬೆದರಿಕೆ ಕರೆ
ಮುಂಬೈ, ಜೂನ್ 30 : ಮುಂಬೈ ಪೊಲೀಸರಿಗೆ ಮುಂಬೈ ನಗರದ ಮೇಲೆ ಉಗ್ರರ ದಾಳಿ ನಡೆಯಲಿದೆ ಎಂದು ಬೆದರಿಕೆ ಕರೆ ಬಂದಿದ್ದು, ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ನಗರದ ಸೂಕ್ಷ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಪಾಕಿಸ್ತಾನದ ಕರಾಚಿಯಿಂದ ಸೋಮವಾರ ರಾತ್ರಿ ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದ್ದು, ಫೋನ್ ಮಾಡಿದ ವ್ಯಕ್ತಿ ಮುಂಬೈ ನಗರದ ಹೋಟೆಲ್‌ಗಳ ಮೇಲೆ ಉಗ್ರರು ದಾಳಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಪೊಲೀಸ್ ಅಧಿಕಾರಿಗಳ ಪ್ರಕಾರ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಸದಸ್ಯನೆಂದು ಗುರುತಿಸಿಕೊಂಡ ಕರೆ ಮಾಡಿದವರು ಹೋಟೆಲ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಬೆದರಿಕೆ ಕರೆ ಬಂದ ತಕ್ಷಣವೇ ಪೊಲೀಸರು ತಾಜ್ ಹೋಟೆಲ್ ಸೇರಿದಂತೆ ಸುತ್ತ-ಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದಾರೆ.
ಕಳೆದ ವಾರ ಐವರು ಉಗ್ರರು ದೆಹಲಿಗೆ ಆಗಮಿಸಿದ್ದಾರೆ ಎಂಬ ಸುದ್ದಿಗಳಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ ಕಳೆದ ಎರಡು ತಿಂಗಳಿನಿಂದ ಉಗ್ರರು ಸಕ್ರಿಯರಾಗಿದ್ದಾರೆ. ಅಷ್ಟೇ ಅಲ್ಲ ಹಲವಾರು ಉಗ್ರರು ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ.
ಮುಂಬೈ ಪೊಲೀಸರಿಗೆ ಬಂದಿರುವ ಬೆದರಿಕೆ ಕರೆ, ಹುಸಿ ಕರೆಯಾಗಿರುವ ಸಾಧ್ಯತೆಯೂ ಇದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆಯನ್ನು ಒದಗಿಸಿರುವ ಪೊಲೀಸರು ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ.