ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್-ಎ-ಮೊಹಮ್ಮದ್ ನ ಎರಡು ಹೊಸ ಉಗ್ರ ತರಬೇತಿ ಕೇಂದ್ರಗಳು ನಿರ್ಮಾಣವಾಗುತ್ತಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿದೆ.
ತಾಂತ್ರಿಕ ಮತ್ತು ಇತರ ಮೂಲಗಳು ಬಾಲಾಕೋಟ್ ನಲ್ಲಿ ಎರಡು ಹೊಸ ತರಬೇತಿ ಕೇಂದ್ರಗಳು ತಲೆ ಎತ್ತುತ್ತಿದ್ದು, ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಮತ್ತಷ್ಟು ತರಬೇತಿ ಆರಂಭವಾಗುವ ಸಾಧ್ಯತೆ ಇರುವುದಾಗಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದೆ. ಉಗ್ರ ಯೂಸುಫ್ ಅಝರ್ ಹೊಸ ಕೇಂದ್ರಗಳಿಗೆ ಮುಖ್ಯಸ್ಥನಾಗಿದ್ದು, ವಿಧ್ವಂಸಕ ಕೃತ್ಯಗಳಿಗೆ ತರಬೇತಿ ನೀಡುತ್ತಿರುವುದಾಗಿ ವರದಿ ತಿಳಿಸಿದೆ.
ಕಳೆದ ವರ್ಷ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ 44 ಮಂದಿ ಭಾರತೀಯ ಯೋಧರು ಹುತಾತ್ಮ ರಾಗಿದ್ದರು. ಆ ಬಳಿಕ ಭಾರತವು ಬಾಲಾಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿ ಉಗ್ರರ ಕೇಂದ್ರಗಳನ್ನು ನಾಶಪಡಿಸಿತ್ತು.
ಪಾಕಿಸ್ತಾನ ಜಮ್ಮು ಕಾಶ್ಮೀರದಲ್ಲಿ ಹಿಮಪಾತ ಉಂಟಾಗುತ್ತಿದ್ದರೂ, ಲೆಕ್ಕಿಸದೆ ಭಾರೀ ಪ್ರಮಾಣದಲ್ಲಿ ಉಗ್ರರನ್ನು ಭಾರತದೊಳಕ್ಕೆ ನುಗ್ಗಿಸಲು ಅಗಸ್ಟ್ 5ರಿಂದ( ಭಾರತ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದ ದಿನ) ಪ್ರಯತ್ನ ಮಾಡುತ್ತಿದೆ ಎಂದೂ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.








