ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ (Malleswaram BJP Office) ಸ್ಫೋಟಿಸಲು ಉಗ್ರರು ಸಂಚು ರೂಪಿಸಿರುವ ವಿಷಯ ಬಹಿರಂಗವಾಗುತ್ತಿದ್ದಂತೆ ಪೊಲೀಸ್ ಭದ್ರತೆಯನ್ನು (Police Security) ಹೆಚ್ಚಿಸಲಾಗಿದೆ.
ಉಗ್ರರ ಸಂಚು ರೂಪಿಸಿದ ವಿಚಾರವನ್ನು ರಾಷ್ಟ್ರೀಯ ತನಿಖಾ ದಳ (NIA) ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಎದುರು ಮೆಟಲ್ ಡಿಟೆಕ್ಟರ್ (Metal Detector) ಅಳವಡಿಕೆ ಮಾಡಲಾಗಿದೆ.
ಮೆಟಲ್ ಡಿಟೆಕ್ಟರ್ ಮೂಲಕವೇ ಬಿಜೆಪಿ ಕಚೇರಿಗೆ ಭೇಟಿಗೆ ಬರುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರವೇಶ ದ್ವಾರದ ಎದುರು ಮೂರ್ನಾಲ್ಕು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಬಿಜೆಪಿ ಕಚೇರಿಗೆ ಮಲ್ಲೇಶ್ವರಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಬಾಲ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ದಿನವೇ ಬಿಜೆಪಿ ಕಚೇರಿಯಲ್ಲಿ ಬಾಂಬ್ ಸ್ಫೋಟಿಸುವ ಸಂಚನ್ನು ಐಸಿಸ್ ಶಂಕಿತ ಉಗ್ರರು ರೂಪಿಸಿದ್ದರು ಎಂಬ ಶಾಕಿಂಗ್ ವಿಚಾರ ಬಯಲಿಗೆ ಬಂದಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast Case) ಪ್ರಕರಣದ ಆರೋಪಿಗಳಾದ ಮುಸ್ಸಾವಿರ್ ಹುಸೇನ್ ಶಾಜಿದ್, ಅಬ್ದುಲ್ ಮತೀನ್ ತಾಹ, ಮಾಜ್ ಮುನೀರ್ ಅಹಮದ್, ಮುಜಾಮಿಲ್ ಷರೀಫ್ ವಿರುದ್ಧ ಎನ್ ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಈ ವಿಷಯ ಕೂಡ ಬಹಿರಂಗವಾಗಿದೆ.








