ಉಡುಪಿ: ಪೊಲೀಸ್ ಠಾಣೆಯಲ್ಲಿದ್ದ ಆರೋಪಿ ಸಾವನ್ನಪ್ಪಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಹಿಳೆ ಮತ್ತು ಮಕ್ಕಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಆರೋಪಿ ಪೊಲೀಸರ ವಶದಲ್ಲಿದ್ದ. ಕೇರಳದ ಬಿಜು ಮೋಹನ್ ಎಂಬ ಮಹಿಳೆ ಮತ್ತು ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ ಬ್ರಹ್ಮಾವರ ಪೊಲೀಸರು, ಲಾಕಪ್ ನಲ್ಲಿ ಆರೋಪಿಯನ್ನು ಇರಿಸಿದ್ದರು. ಆದರೆ, ಏಕಾಏಕಿ ಆರೋಪಿ ಬೆಳಗ್ಗೆ ಕುಸಿದು ಬಿದ್ದ ಸ್ಥಿತಿಯಲ್ಲಿದ್ದ. ಕೂಡಲೇ ಆತನನ್ನು ಪೊಲೀಸರೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ನೀಡುವ ಮೊದಲೇ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಹೀಗಾಗಿ ಲಾಕಪ್ ಡೆತ್ ಪ್ರಕರಣದ ಆರೋಪ ಕೇಳಿ ಬರುತ್ತಿದೆ.
ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಮೂಲದ ವ್ಯಕ್ತಿ ಬಿಜು ಥಾಮಸ್ ಎನ್ನಲಾಗಿದೆ. ಕೆಲ ಸಮಯದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಚ್ಚಿನ್ ಶಿಪ್ ವಾರ್ಡಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈತ ವಿಪರೀತವಾಗಿ ಕುಡಿಯುತ್ತಿದ್ದ ಎನ್ನಲಾಗಿದೆ. ಸಂಜೆ ಚೇರ್ಕಾಡಿ ಗ್ರಾಮದಲ್ಲಿ ಮನೆಗೆ ಹೋಗಿ ಮಹಿಳೆ ಮತ್ತು ಆಕೆಯ ಮಕ್ಕಳನ್ನು ಚುಡಾಯಿಸಿದ್ದ. ಸ್ಥಳೀಯರು ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು ಎನ್ನಲಾಗಿದೆ.