ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ವಂಚಿಸುತ್ತಿದ್ದ ಮಹಿಳೆಯ ಬಂಧನ
ಚೆನ್ನೈ, ಅಗಸ್ಟ್ 21: ಉದ್ಯೋಗ ಪಡೆಯಲು ಸಹಾಯ ಮಾಡುವ ಭರವಸೆಯ ಮೇರೆಗೆ 52 ವರ್ಷದ ಮಹಿಳೆಯೊಬ್ಬರು ಹಲವಾರು ಜನರಿಗೆ ಸರಿಸುಮಾರು 50 ಲಕ್ಷ ರೂ ಮೋಸ ಮಾಡಿರುವ ಘಟನೆ ಚೆನ್ನೈ ನಿಂದ ವರದಿಯಾಗಿದೆ. ನೀಲಂಕರೈ ಬಳಿಯ ಅಕ್ಕರೈ ನಿವಾಸಿ ಡಿ ಜನುನಾದೇವಿ ಎಂದು ಗುರುತಿಸಿರುವ ಮಹಿಳೆಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಈಕೆ ತಮಿಳುನಾಡು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಸಹಾಯ ಮಾಡುತ್ತೇನೆ ಎಂದು ನಂಬಿಸಿ ಹಲವಾರು ಜನರಿಗೆ ಮೋಸ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಆರೋಪಿಯ ವಿರುದ್ಧ ಅನೇಕ ದೂರುಗಳ ದಾಖಲಾದ ನಂತರ ಜಮುನಾದೇವಿಯ ಬಗ್ಗೆ ಮಾಹಿತಿ ಕಲೆ ಹಾಕಿ ನೀಲಂಕಾರೈ ಪೊಲೀಸರು ಆಕೆಯನ್ನು ಬಂಧಿಸಿದ್ದು, ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿ ಕ್ರಮ ಕೈಗೊಳ್ಳಲಾಗಿದೆ.

ಮಹಿಳೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಪಾಜ್ಹಲ್ ಜೈಲಿಗೆ ಕಳುಹಿಸಲಾಗಿದೆ.ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡುವ ಭರವಸೆ ನೀಡುವ ಇಂತಹ ಜನರ ವಿರುದ್ಧ ಜಾಗರೂಕರಾಗಿರಲು ಪೊಲೀಸರು ಜನರನ್ನು ಕೋರಿದ್ದಾರೆ.








