ಮತ್ತೆ ಟೀಮ್ ಇಂಡಿಯಾ ಮನೆಯೊಂದು ಮೂರು ಬಾಗಿಲು ಆಗುತ್ತಿದೆಯಾ..?
ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಮನವಿಗೆ ಆಯ್ಕೆ ಸಮಿತಿ ಸ್ಪಂದಿಸಿಲ್ಲ. ಹೀಗಾಗಿ ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಇಂಗ್ಲೆಂಡ್ ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳುತ್ತಿಲ್ಲ.
ಮುಖ್ಯವಾಗಿ ಪೃಥ್ವಿ ಶಾ ಅವರನ್ನು ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕಳುಹಿಸಿಕೊಡುವಂತೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಅವರಿಗೆ ಇ-ಮೇಲ್ ಮೂಲಕ ಮನವಿ ಮಾಡಿಕೊಂಡಿತ್ತು. ಆದ್ರೆ ಚೇತನ್ ಶರ್ಮಾ ಅವರು ಇ-ಮೇಲ್ಗೆ ಯಾವುದೇ ರೀತಿಯ ಉತ್ತರ ನೀಡಿರಲಿಲ್ಲ.
ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಜೊತೆ ಇಬ್ಬರು ಆರಂಭಿಕ ಆಟಗಾರರು ಇದ್ದಾರೆ. ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ತಂಡದಲ್ಲಿದ್ದಾರೆ. ಜೊತೆಗೆ ಅಭಿಮನ್ಯು ಈಶ್ವರನ್ ಕೂಡ ಸೇರಿಕೊಂಡಿದ್ದಾರೆ. ಹೀಗಾಗಿ ಆರಂಭಿಕ ಆಟಗಾರರ ಅವಶ್ಯಕತೆ ಇಲ್ಲ ಅನ್ನೋದು ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಅಭಿಮತವಾಗಿದೆ.
ಆದ್ರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರಿಗೆ ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ಮೇಲೆ ನಂಬಿಕೆ ಇಲ್ವಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಹಾಗೇ ಅಭಿಮನ್ಯು ಈಶ್ವರನ್ ಅವರ ಆಯ್ಕೆ ಕೂಡ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಗೆ ಸಮಾಧಾನ ತಂದಿಲ್ಲ.
ಈ ನಡುವೆ, ಕೆ.ಎಲ್. ರಾಹುಲ್ ಅಥವಾ ಮಯಾಂಕ್ ಅಗರ್ ವಾಲ್ ಪೈಕಿ ಒಬ್ಬರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಅದೇ ರೀತಿ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಫಾರ್ಮ್ ನಲ್ಲಿಲ್ಲ. ಹೀಗಾಗಿ ಅವರ ಜಾಗದಲ್ಲಿ ಮಯಾಂಕ್ ಅಥವಾ ರಾಹುಲ್ ಆಡುವ ಸಾಧ್ಯತೆಗಳು ಕೂಡ ಇವೆ. ಹಾಗಾಗಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಪೃಥ್ವಿ ಶಾಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಮಣೆ ಕೂಡ ಹಾಕಿರಬಹುದು.
ಇನ್ನೊಂದೆಡೆ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಬಿಸಿಸಿಐ ಕೂಡ ಮೌನ ವಹಿಸಿದೆ. ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಅವರು ಶ್ರೀಲಂಕಾ ಸರಣಿಯನ್ನು ಆಡಲಿದ್ದಾರೆ. ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಕೂಡ ಮುಂದಾಗಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್, ಆಯ್ಕೆ ಸಮಿತಿ ಮತ್ತು ಬಿಸಿಸಿಐ ನಡುವೆ ಸಹಮತವಿಲ್ಲ ಎಂಬುದು ಗೊತ್ತಾಗುತ್ತಿದೆ. ತಂಡದ ಆಯ್ಕೆಯ ವಿಚಾರದಲ್ಲಿ ಭಿನ್ನಸ್ವರಗಳು ಕೇಳಿಬರುತ್ತಿವೆ. ಈ ಹಿಂದೆ ಸುನೀಲ್ ಜೋಶಿ, ಎಮ್.ಎಸ್.ಕೆ. ಪ್ರಸಾದ್ ಸೇರಿದಂತೆ ಕಳೆದ ಹತ್ತು ವರ್ಷಗಳಿಂದ ಟೀಮ್ ಇಂಡಿಯಾದ ಆಯ್ಕೆ ವಿಚಾರದಲ್ಲಿ ಅಷ್ಟೊಂದು ಗೊಂದಲಗಳು ಇರಲಿಲ್ಲ. ಕೆಲವೊಂದು ಬಾರಿ ಕಠಿಣ ನಿರ್ಧಾರವನ್ನು ಆಯ್ಕೆ ಸಮಿತಿಯು ತೆಗೆದುಕೊಂಡಿದ್ರೂ ಅದರ ವಿರುದ್ಧ ಬಹಿರಂಗವಾಗಿ ಎಲ್ಲೂ ಕೂಡ ಭಿನ್ನ ಮಾತುಗಳು ಕೇಳಿಬಂದಿರಲಿಲ್ಲ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಸಾಕಷ್ಟು ಯುವ ಆಟಗಾರರು ತಂಡವನ್ನು ಸೇರಿಕೊಳ್ಳಲು ಸ್ಪರ್ಧೆ ನಡೆಸುತ್ತಿದ್ದಾರೆ. ಅಂತಹುದ್ದರಲ್ಲಿ ಆಯ್ಕೆ ಸಮಿತಿ, ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ ಮೆಂಟ್ ಈ ರೀತಿ ಕಿತ್ತಾಟ ನಡೆಸುತ್ತಿರುವುದು ಸರಿಯಲ್ಲ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಅಭಿಮತವಾಗಿದೆ.