ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದಿಲ್ಲ – ನೈತಿಕ ಶಿಕ್ಷಣದ ರೂಪದಲ್ಲಿ ತರಲಾಗುವುದು – ಬಿ.ಸಿ.ನಾಗೇಶ್
ಪಠ್ಯಕ್ರಮದಲ್ಲಿ ರಾಮಾಯಣ-ಭಗವದ್ಗೀತೆ ಅಳವಡಿಸುವುದಿಲ್ಲ ಅದರ ಬದಲಾಗಿ ನೈತಿಕ ಶಿಕ್ಷಣ ಮೂಲಕ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಮೌಲ್ಯಯುತ ಶಿಕ್ಷಣ ಕೊಡುವುದು ತಪ್ಪಿ ಹೋಗಿದೆ. ಹಾಗಾಗಿ ಅದನ್ನು ಮತ್ತೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಪಠ್ಯಕ್ರಮದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸುವುದಾಗಿ ಯಾವತ್ತೂ ಹೇಳಿಲ್ಲ. ಅದರಲ್ಲಿರುವ ಕೆಲ ನೈತಿಕ ಅಂಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಲಾಗುವುದು. ಜತೆಗೆ ಜೀವನಕ್ಕೆ ಬೇಕಾದ ಶಿಕ್ಷಣವನ್ನು ನಾವು ಹೇಳಿಕೊಡುತ್ತೇವೆಯೇ ಹೊರತು, ಧಾರ್ಮಿಕವಾಗಿ ಪೂಜೆಯನ್ನು ಯಾವ ರೀತಿ ಮಾಡುತ್ತೇವೆ ಎಂದು ಹೇಳಿಕೊಡುವುದಿಲ್ಲ ಎಂದರು.
ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಅವರ ನಿಜ ಅಂಶಗಳನ್ನು ಸಹ ಅಳವಡಿಸಿದ್ದೇವೆ. ಬ್ರಿಟೀಷರ ವಿರುದ್ಧ ಹೋರಾಡಿದ ಸಂಗತಿಗಳನ್ನು ಹಾಕಲಾಗಿದೆ ಎಂದ ಅವರು, ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದು ನಿಜ ಎನ್ನುವುದನ್ನು ನಾವು ಸಹ ಒಪ್ಪಿಕೊಂಡಿದ್ದೇವೆ. ಆದರೆ, ಕನ್ನಡವನ್ನು ತೆಗೆದು ಹಾಕಿ ಪರ್ಷಿಯನ್ ಭಾಷೆ ಅಳವಡಿಸಿದ್ದು ಕೂಡಾ ಟಿಪ್ಪು ಸುಲ್ತಾನ್ ಅವರೇ ಎಂಬುದು ಸಹ ಅಷ್ಟೇ ಸತ್ಯ ಎಂದು ತಿಳಿಸಿದರು.
ತುಮಕೂರಿನ ಕೋರಾದಲ್ಲಿ ಮಮತಾ ಹರ್ಷ ದಂಪತಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯವನ್ನ ತಿಳಿಸಿದರು.








