ಹೊಸದಿಲ್ಲಿ, ಮೇ 16 : ಸ್ವಿಟ್ಜರ್ಲೆಂಡ್ ನ ಜಿನಿವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂ. ಎಚ್.ಒ) ವಾರ್ಷಿಕ ಸಮ್ಮೇಳನ ಇದೇ 18ರಿಂದ ಶುರುವಾಗಲಿದೆ. ವಿಶ್ವದ 34 ರಾಷ್ಟ್ರಗಳು ಭಾಗವಹಿಸುವ ಈ ಸಭೆಯಲ್ಲಿ ಭಾರತವನ್ನು ಡಬ್ಲ್ಯೂ. ಎಚ್.ಒ ಮೂರು ವರ್ಷಗಳ ಅವಧಿಯ ಕಾರ್ಯಕಾರಣಿಯ ಸದಸ್ಯ ರಾಷ್ಟ್ರವನ್ನಾಗಿ ಆರಿಸಲಿದೆ. ಇದರ ಜೊತೆಯಲ್ಲಿ ಭಾರತಕ್ಕೆ ಕಾರ್ಯಕಾರಣಿಯ ಅಧ್ಯಕ್ಷ ಪಟ್ಟವೂ ದೊರಕಲಿದ್ದು, ಕಾರ್ಯಕಾರಣಿ ಸದಸ್ಯತ್ವ ಪಡೆದ ಮೊದಲ ವರ್ಷವೇ ಅಧ್ಯಕ್ಷ ಸ್ಥಾನಕ್ಕೇರಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಲಿದೆ. ಇದರ ಜೊತೆ ದೊಡ್ಡದಾದ ಸವಾಲುಗಳು ಭಾರತದ ಮುಂದಿದ್ದು, ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಬೇಕಾಗಿದೆ.
ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಒತ್ತಡಕ್ಕೆ ಮಣಿದು ಕೊರೊನಾ ಸೋಂಕಿನ ಗಂಭೀರತೆಯನ್ನು ಮುಚ್ಚಿಟ್ಟು ತನ್ನ ಕರ್ತವ್ಯದಿಂದ ನುಣುಚಿಕೊಂಡ ಆರೋಪ ಎದುರಿಸುತ್ತಿದೆ. ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾದ ವಿರುದ್ಧ ತನಿಖೆಗೆ ಒತ್ತಡ ಹೇರಿರುವುದರಿಂದ ತನಿಖೆ ಕೈಗೊಳ್ಳಲೇ ಬೇಕಾದ ಅನಿವಾರ್ಯತೆ ಭಾರತಕ್ಕೆ ಬಂದೊದಗಿದೆ. ಆದರೆ ನೆರೆ ರಾಷ್ಟ್ರ ಚೀನಾದ ವಿರುದ್ಧ ತನಿಖೆ ನಡೆಸುವುದರಿಂದ ಭಾರತದ ಹಿತಾಸಕ್ತಿಗೆ ಧಕ್ಕೆಯಾಗುವ ಸಂಭವವಿದೆ. ಅಷ್ಟೇ ಅಲ್ಲ, ಭಾರತ-ಚೀನಾದ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಭಾರತ ಚೀನಾದ ಉತ್ಪಾದನಾ ರಂಗವನ್ನು ಬಹುತೇಕ ಅವಲಂಬಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನಾದ ವಿರುದ್ಧ ಭಾರತ ನಿಂತರೆ ಭಾರತದ ಗಡಿ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗುವ, ಅಂತರಿಕ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಭಾರತದ ಪಾಲಿಗೆ ಇದೊಂದು ದೊಡ್ಡ ಸವಾಲಿನ ಸಂದರ್ಭವಾಗಿದ್ದು, ಇದನ್ನು ಯಾವ ರೀತಿ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು.