ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆರಾಯ ವಿಶ್ರಾಂತಿ ಪಡೆಯುತ್ತಿಲ್ಲ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ತುಂಬಿ ಹರಿಯುತ್ತಿದ್ದ ಮಾರ್ಕಂಡೇಯ ನದಿಗೆ (Markandeya River) ಬೈಕ್ ಬಿದ್ದು ಓರ್ವ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಅಲತ್ತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23), ನಾಪತ್ತೆಯಾದ ವ್ಯಕ್ತಿ. ಜ್ಯೋತಿನಾಥ್ ಪಾಟೀಲ ಈಜುತ್ತ ದಡ ಸೇರಿರುವ ವ್ಯಕ್ತಿ. ಬೈಕ್ ನಲ್ಲಿ ಇಬ್ಬರು ಸಹೋದರರು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ನದಿಯ ಪಾಲಾಗಿದೆ. ಈ ವೇಳೆ ಓರ್ವ ಸಹೋದರ ಈಜುತ್ತ ದಡ ಸೇರಿದ್ದಾನೆ. ನಾಪತ್ತೆಯಾಗಿರುವ ಮತ್ತೋರ್ವ ಸಹೋದರನ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಬೆಳಗಾವಿ ತಾಲೂಕಿನ ಕಂಗ್ರಾಳಿ ಬಳಿಯಿರುವ ಮಾರ್ಕಂಡೇಯ ನದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಶ್ರಾವಣ ಅಮಾವಾಸ್ಯೆ ಇರುವ ಹಿನ್ನೆಲೆಯಲ್ಲಿ ಕಟ್ಟಿಂಗ್ ಮಾಡಿಸಿಕೊಳ್ಳಲು ಬೆಳಗಾವಿಗೆ ಬರುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಹರಿಯುವ ನೀರಿನಲ್ಲಿ ಬೈಕ್ ಬಿದ್ದಿದೆ. ಆದರೆ, ಜ್ಯೋತಿನಾಥ ಪಾಟೀಲ ಅಪಾಯದಿಂದ ಪಾರಾಗಿದ್ದಾನೆ. ಶೋಧ ಕಾರ್ಯಾಚರಣೆ ಮುಂದಯವರಿದಿದೆ. ಸ್ಥಳಕ್ಕೆ ಬೆಳಗಾವಿ ನಗರ ಡಿಸಿಪಿ ಪಿ.ವಿ ಸ್ನೇಹಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.