ಟೀಮ್ ಇಂಡಿಯಾದ ವಾರಿಯರ್ ರವೀಂದ್ರ ಜಡೇಜಾ.. ಇದು ಜಡ್ಡುವಿನ ಬಯೋಗ್ರಾಫಿ..!
ರವೀಂದ್ರ ಸಿಂಗ್ ಅನಿರುದ್ಧ್ ಸಿಂಗ್ ಜಡೇಜಾ..
ಟೀಮ್ ಇಂಡಿಯಾದ ಆಲ್ ರೌಂಡರ್. ಸಹ ಆಟಗಾರರ ಪ್ರೀತಿಯ ಜಡ್ಡು.. ವಿಶ್ವ ಕ್ರಿಕೆಟ್ ನಲ್ಲಿ ರವೀಂದ್ರ ಜಡೇಜಾ ಹೆಸರು ತೀರಾ ಚಿರಪರಿಚಿತ.
ಬೌಲಿಂಗ್ ನಲ್ಲಿ ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ತಬ್ಬಿಬ್ಬುಗೊಳಿಸುವ ಚಾಕಚಕ್ಯತೆ ಇದೆ. ಹಾಗೇ ಬ್ಯಾಟಿಂಗ್ ನಲ್ಲೂ ಎದುರಾಳಿ ಬೌಲರ್ ಗಳನ್ನು ದ್ವಂಸಗೊಳಿಸುವ ಸಾಮಥ್ರ್ಯವೂ ಇದೆ. ಅಷ್ಟೇ ಅಲ್ಲ, ಕ್ಷೇತ್ರ ರಕ್ಷಕನಾಗಿ ಎದುರಾಳಿ ಬ್ಯಾಟ್ಸ್ ಮೆನ್ ಗಳಿಗೆ ಸಿಂಹಸ್ವಪ್ನವಾಗಿ ಕಾಡುವಂತಹ ಫೀಲ್ಡರ್ ಕೂಡ ಹೌದು.
ಕಳೆದ ಹತ್ತು -15 ವರ್ಷಗಳಿಂದ ರವೀಂದ್ರ ಜಡೇಜಾ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಎರಡು ಬಾರಿ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ ಹೆಗ್ಗಳಿಕೆ ಕೂಡ ರವೀಂದ್ರ ಜಡೇಜಾಗಿದೆ. ಅದ್ರಲ್ಲಿ ಒಂದು ಬಾರಿ ರನ್ನರ್ ಅಪ್ ಮತ್ತು ಒಂದು ಬಾರಿ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆಯೂ ಜಡೇಜಾ ಅವರಿಗಿದೆ.
ಅಂದ ಹಾಗೇ ರವೀಂದ್ರ ಜಡೇಜಾ ಇಂದು ವಿಶ್ವ ಕ್ರಿಕೆಟ್ ನಲ್ಲಿ ಹೆಸರು ಮಾಡಿರಬಹುದು. ಆದ್ರೆ ಅದರ ಹಿಂದಿನ ಶ್ರಮ, ಕಷ್ಟ, ಏಳುಬೀಳುಗಳು ಸಾಕಷ್ಟಿವೆ. ಪ್ರತಿ ಹಂತದಲ್ಲೂ ಕಷ್ಟಪಟ್ಟಿದ್ದಾರೆ. ಸಂಕಷ್ಟದ ಸಮಯದಲ್ಲೂ ಎಂದೆಗುಂದದ ರವೀಂದ್ರ ಜಡೇಜಾ ಇಂದು ವಿಶ್ವ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಕೂಡ ಬರೆದಿದ್ದಾರೆ. ಟೀಮ್ ಇಂಡಿಯಾದ ರೋಚಕ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ರವೀಂದ್ರ ಜಡೇಜಾ ಹುಟ್ಟಿದ್ದು ಡಿಸೆಂಬರ್ 6, 1988ರಲ್ಲಿ. ಗುಜರಾತಿನ ರಜಪೂತ್ ಕುಟುಂಬದ ಕುಡಿ. ಹಾಗಂತ ಹುಟ್ಟು ಶ್ರೀಮಂತನಲ್ಲ. ಮಧ್ಯಮ ವರ್ಗದ ಕುಟುಂಬದವರು. ತಂದೆ ಅನಿರುದ್ಧ ಸಿಂಗ್. ಖಾಸಗಿ ಕಂಪೆನಿಯೊಂದರ ವಾಚ್ ಮೆನ್. ತಾಯಿ ಲತಾ ಅವರು ನರ್ಸ್ ಆಗಿದ್ರು. ಅಕ್ಕ ನೈನಾ ಕೂಡ ನಸ್ ಆಗಿದ್ದಾರೆ. 2005ರಲ್ಲಿ ಜಡೇಜಾ ಅವರ ತಾಯಿ ಲತಾ ಅವರು ನಿಧನರಾಗಿದ್ದರು. ಆಗ ರವೀಂದ್ರ ಜಡೇಜಾಗೆ ತಾಯಿ ಸ್ಥಾನ ತುಂಬಿದ್ದು ಅಕ್ಕ ನೈನಾ.
ಗುಜರಾತಿನ ಜಾಮ್ ನಗರ ಜಿಲ್ಲೆಯ ನವಗಮ್ ಘೇಡ್ ರವೀಂದ್ರ ಜಡೇಜಾ ಅವರ ಹುಟ್ಟೂರು. ಅಪ್ಪನಿಗೆ ಮಗ ಆರ್ಮಿ ಆಫೀಸರ್ ಆಗಬೇಕು ಅನ್ನೋ ಆಸೆ. ಆದ್ರೆ ಮಗನ ಆಸಕ್ತಿಯೇ ಬೇರೆಯಾಗಿತ್ತು. ಕ್ರಿಕೆಟಿಗನಾಗಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಬೇಕು ಅನ್ನೋ ಕನಸು ಕಟ್ಟಿಕೊಂಡಿದ್ದರು. ಅದಕ್ಕೆ ಪೂರಕವಾಗಿ ರವೀಂದ್ರ ಜಡೇಜಾ ಅವರು ಕ್ರಿಕೆಟ್ ಮೇಲೆ ಅಪಾರವಾದ ಪ್ರೀತಿಯನ್ನಿಟ್ಟುಕೊಂಡಿದ್ದರು. ಬಾಲ್ಯದಲ್ಲಿ ತನ್ನಗಿಂತ ದೊಡ್ಡವರ ಜೊತೆ ಕ್ರಿಕೆಟ್ ಆಡುತ್ತಿದ್ದ ಬಾಲಕ ಜಡೇಜಾ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತಿರಲಿಲ್ಲ. ಆಗ ಆಳುತ್ತಾ ಮನೆಗೆ ಬರುತ್ತಿದ್ದರು. ಆಗ ರವೀಂದ್ರ ಜಡೇಜಾ ಅವರ ತಾಯಿ ಸಮಾಧಾನಪಡುತ್ತಿದ್ದರು.
ಬಳಿಕ ರವೀಂದ್ರ ಸಿಂಗ್ ಅವರು ಕ್ರಿಕೆಟ್ ಕೋಚ್ ಮಹೇಂದ್ರ ಸಿಂಗ್ ಚೌಹ್ಹಾಣ್ ಅವರ ಕಣ್ಣಿಗೆ ಬಿದ್ರು. ಜಾಮ್ ನಗರದ ಕ್ರಿಕೆಟ್ ಬಂಗ್ಲದಲ್ಲಿ ತರಬೇತಿ ಕೇಂದ್ರಲ್ಲಿ ಸೇರಿಕೊಂಡ್ರು. ಕೇವಲ ಎಂಟರ ಹರೆಯದ ರವೀಂದ್ರ ಜಡೇಡಾ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಆದ್ರೆ ಚೌಹ್ಹಾಣ್ ಅವರು ರವೀಂದ್ರ ಜಡೇಜಾ ಅವರ ಬದುಕನ್ನೇ ಬದಲಾಯಿಸಿದ್ರು. ಅಚ್ಚರಿ ಅಂದ್ರೆ ರವೀಂದ್ರ ಜಡೇಜಾ ಅವರು ಆರಂಭದಲ್ಲಿ ವೇಗದ ಬೌಲರ್ ಆಗಿದ್ದರು. ಬಳಿಕ ಎಡಗೈ ಸ್ಪಿನ್ನರ್ ಆಗಿ ರೂಪುಗೊಂಡ್ರು.
ಗುರುವಿನ ನೆಚ್ಚಿನ ಶಿಷ್ಯನಾಗಿದ್ದ ಜಡೇಜಾ, ಒಂದು ಬಾರಿ ಗುರುವಿನಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದರು. ಪಂದ್ಯವೊಂದರಲ್ಲಿ ಐದು ವಿಕೆಟ್ ಉರುಳಿಸಿದ್ರೂ ದುಬಾರಿಯಾಗಿದ್ದರು. ಇದ್ರಿಂದ ಸಿಟ್ಟಿಗೆದ್ದ ಕೋಚ್ ಚೌಹ್ವಾಣ್ ಅವರು ರವೀಂದ್ರ ಜಡೇಜಾಗೆ ಮೈದಾನದ ಪಿಚ್ ನಲ್ಲೇ ಕಪಾಳಕ್ಕೆ ಹೊಡೆದಿದ್ದರು.
ಸ್ಥಳೀಯ ಟೂರ್ನಿಗಳಲ್ಲಿ ರವೀಂದ್ರ ಜಡೇಜಾ ಹೆಸರು ಚಿರಪರಿಚಿತವಾಗಿತ್ತು. ಹಾಗೇ ರಾಜ್ಯದ ತಂಡದ ವಿವಿಧ ವಯೋಮಿತಿ ಟೂರ್ನಿಗಳಲ್ಲೂ ಭಾಗಿಯಾಗುತ್ತಿದ್ದರು.. ಅಲ್ಲದೆ 2006 ಮತ್ತು 2008ರ 19 ವಯೊಮಿತಿ ವಿಶ್ವಕಪ್ ಟೂರ್ನಿಯಲ್ಲೂ ಆಡಿದ್ದರು. ಅಲ್ಲದೆ 2006ರಲ್ಲಿ ರಣಜಿ ಟೂರ್ನಿಗೂ ಎಂಟ್ರಿಯಾಗಿದ್ದರು.
ಇನ್ನು 2008ರಲ್ಲಿ ರವೀಂದ್ರ ಜಡೇಜಾ ಚೊಚ್ಚಲ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡ್ರು. ಫೈನಲ್ ನಲ್ಲಿ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನವನ್ನೇ ನೀಡಿದ್ದರು. ಅಲ್ಲದೆ ನಾಯಕ ಶೇನ್ ವಾರ್ನ್ ಅವರಿಂದ ರಾಕ್ ಸ್ಟಾರ್ ಅನ್ನೋ ಬಿರುದನ್ನು ಪಡೆದುಕೊಂಡಿದ್ದರು.
ಬಳಿಕ 2008-09ರ ರಣಜಿ ಟೂರ್ನಿಯಲ್ಲಿ ಆಲ್ ರೌಂಡ್ ಪ್ರದರ್ಶನವನ್ನು ನೀಡಿದ್ದರು. 739 ರನ್ ಹಾಗೂ 42 ವಿಕೆಟ್ ಪಡೆದು ರಾಷ್ಟ್ರೀಯ ತಂಡದ ಕದ ಕೂಡ ತಟ್ಟಿದ್ದರು. ಅಲ್ಲದೆ ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಅದೇ ಸರಣಿಯಲ್ಲಿ ಚೊಚ್ಚಲ ಟಿ-ಟ್ವೆಂಟಿ ಪಂದ್ಯಕ್ಕೂ ಪದಾರ್ಪಣೆ ಮಾಡಿದ್ದರು.
ಈ ನಡುವೆ, 2010ರಲ್ಲಿ ರವೀಂದ್ರ ಜಡೇಜಾ ಐಪಿಎಲ್ ನಲ್ಲಿ ಒಂದು ವರ್ಷದ ನಿಷೇಧಕ್ಕೂ ಗುರಿಯಾಗಿದ್ದರು. ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾದ್ರು. 2012ರಲ್ಲಿ ದೇಶಿ ಕ್ರಿಕೆಟ್ ನಲ್ಲಿ ಮೂರು ತ್ರಿಶತಕ ದಾಖಲಿಸಿ ವಿಶ್ವ ಕ್ರಿಕೆಟ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದರು. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ರು.
ಬಳಿಕ ರವೀಂದ್ರ ಜಡೇಜಾ ಹಿಂತಿರುಗಿ ನೋಡಲೇ ಇಲ್ಲ. ಮೂರು ಮಾದರಿಯ ಕ್ರಿಕೆಟ್ ನಲ್ಲೂ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಖಾಯಂ ಸದಸ್ಯರಾದ್ರು. 2013ರಲ್ಲಿ ಏಕದಿನ ಕ್ರಿಕೆಟ್ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನಕ್ಕೇರಿದ್ರು. ಈ ಸಾಧನೆ ಮಾಡಿದ್ದ ಭಾರತದ ಎರಡನೇ ಬೌಲರ್ ಎಂಬ ಗೌರವಕ್ಕೂ ಪಾತ್ರರಾದ್ರು.
2015ರ ವಿಶ್ವಕಪ್ ನಲ್ಲಿ ಫುಲ್ ಫಿಟ್ ಆಗಿಲ್ಲದಿದ್ರೂ ಆಡಿದ್ರು. ನಂತರ ತಂಡದಿಂದ ಕೈಬಿಡಲಾಗಿತ್ತು. ಬಳಿಕ ಮತ್ತೆ ತಂಡವನ್ನು ಸೇರಿಕೊಂಡ್ರು. 2016ರ ಆಸ್ಟ್ರೇಲಿಯಾ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡ್ರು, ಇನ್ನೊಂದೆಡೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಹಾರ್ದಿಕ್ ಪಾಂಡ್ಯ ರನೌಟ್ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯ್ತು. ಬಳಿಕ 2018ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ದಾಖಲಿಸಿ ತನ್ನ ತಾಯಿಗೆ ಅರ್ಪಣೆ ಮಾಡಿದ್ದರು.
2019ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಏಕಾಂಗಿ ಹೋರಾಟ ನಡೆಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆ ನಂತರ 2020ರ ಆಸ್ಟ್ರೇಲಿಯಾ ಸರಣಿಯ ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ನಂತರ ಚೇತರಿಸಿಕೊಂಡು ಐಪಿಎಲ್ ನಲ್ಲಿ ಆಡಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು.
ಒಟ್ಟಾರೆಯಾಗಿ ರವೀಂದ್ರ ಜಡೇಜಾ ಅವರು ಇಲ್ಲಿಯವರೆಗೆ 51 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 1954 ರನ್ ಹಾಗೂ ಒಂದು ಶತಕ ಹಾಗು 15 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಹಾಗೇ 220 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ 168 ಪಂದ್ಯಗಳನ್ನು ಆಡಿದ್ದು, 2411 ರನ್ ಹಾಗೂ 13 ಅರ್ಧಶತಕ ಹಾಗೂ 188 ವಿಕೆಟ್ ಗಳನ್ನು ಪಡೆದಿದ್ದಾರೆ.
ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 50 ಪಂದ್ಯಗಳನ್ನು ಆಡಿದ್ದು, 217 ರನ್ ಹಾಗೂ 39 ವಿಕೆಟ್ ಪಡೆದಿದ್ದಾರೆ.
ಒಟ್ಟಿನಲ್ಲಿ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಆಟಗಾರ. ಸಮಯೋಚಿತ ಆಟವನ್ನಾಡುವ ರವೀಂದ್ರ ಜಡೇಜಾ ಬೌಲಿಂಗ್ ಮತ್ತು ಬ್ಯಾಟಿಂಗ್ ಗಿಂತಲೂ ಚಿರತೆಯ ವೇಗದ ಫೀಲ್ಡಿಂಗ್ ನಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ.