ಹುಬ್ಬಳ್ಳಿ : ಜಿಲ್ಲೆಯ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದದಲ್ಲಿ ಹಿರೇಕೆರೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ 8 ವರ್ಷದ ಬಾಲಕಿ ಶ್ರೀದೇವಿ ಹನುಮಂತಪ್ಪ ಗಾಣಿಗೇರ ದೇಹ ಪತ್ತೆಯಾಗಿದೆ. ಬಾಲಕಿ ಆಗಸ್ಟ್ 6 ರಂದು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಳು. ಅಂದಿನಿಂದ ನಿರಂತರವಾಗಿ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಇದೀಗ ಬಾಲಕಿಯ ದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿಗಳು, ಬಾಲಕಿಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಗೇ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು, ಗ್ರಾಮೀಣ ಭಾಗದ ನಿವಾಸಿಗಳು ತುಂಬಿ ಹರಿಯುವ ಹಳ್ಳ, ಕೊಳ್ಳಗಳನ್ನು ರಭಸದ ಸಂದರ್ಭದಲ್ಲಿ ದಾಟಲು ಆತುರ ಪಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.








