ಹೃದಯ ಶ್ರೀಮಂತನಾಗಿದ್ದ ದಿನ ಪತ್ರಿಕೆಯ ಹುಡುಗ…!
ಒಂದು ಸಲ ಒಬ್ಬ ವ್ಯಕ್ತಿ ಬಿಲ್ ಗೇಟ್ಸ್ ಅವರಲ್ಲಿ ನಿಮಗಿಂತ ಶ್ರೀಮಂತ ವ್ಯಕ್ತಿ ಈ ಪ್ರಪಂಚದಲ್ಲಿ ಬೇರೆ ಯಾರಾದರೂ ಇರಲು ಸಾಧ್ಯನಾ ಎಂದು ಕೇಳಿದರು. ಅದಕ್ಕೆ ಬಿಲ್ ಗೇಟ್ಸ್ ತಡ ಮಾಡದೇ ಒಬ್ಬ ಇದ್ದಾನೆ ಅಂದಾಗ ಎಲ್ಲರಿಗೂ ಆಶ್ಚರ್ಯವಾಯಿತು.
ಆಗ ಬಿಲ್ ಗೇಟ್ಸ್ ತನ್ನ ಜೀವನದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಹೇಳಿದರು. ಸುಮಾರು ವರ್ಷಗಳ ಹಿಂದೆ, ಆಗ ನಾನು ಅಷ್ಟೊಂದು ಚಿರ ಪರಿಚಿತನಾಗಿರಲಿಲ್ಲ, ಒಂದು ದಿನ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ದಿನ ಪ್ರತಿಕೆಗಳ ಕಡೆ ಕಣ್ಣಾಡಿಸಿದಾಗ, ದಿನಪತ್ರಿಕೆಯ ಮುನ್ನೋಟ ಇಷ್ಟ ಆಯಿತು. ಆದರೆ ಅದನ್ನು ಕೊಂಡು ಕೊಳ್ಳಲು ನನ್ನಲ್ಲಿ ಸರಿಯಾದ ಚಿಲ್ಲರೆ ಇಲ್ಲದ ಕಾರಣ ನಾನು ಹಿಂದೇಟು ಹಾಕಿದೆ. ಆಗ ಅಲ್ಲೇ ಇದ್ದ ಶ್ವೇತ ವರ್ಣದ ಹುಡುಗ ನನಗೆ ಆ ದಿನಪ್ರತಿಕೆಯನ್ನು ನೀಡಲು ಮುಂದಾದಾಗ ಚಿಲ್ಲರೆ ಇಲ್ಲ ಎಂದು ತಿಳಿಸಿದೆ. ಆತ ಉದಾರ ಮನಸ್ಸಿನಿಂದ ಯಾವುದೇ ದುಡ್ಡು ಪಡೆಯದೇ ಉಚಿತವಾಗಿ ಆ ಪತ್ರಿಕೆ ನೀಡಿದ. ಮತ್ತೆ 3 ತಿಂಗಳ ನಂತರ ಕಾಕತಾಳೀಯವಾಗಿ ಮತ್ತೆ ಅದೇ ಪರಿಸ್ಥಿತಿ ಸೃಷ್ಟಿಯಾಯಿತು. ಮತ್ತೆ ನನಗೆ ಉಚಿತವಾಗಿ ನೀಡಲು ಆತ ಮುಂದಾದಾಗ ನನಗೆ ಅದು ಇಷ್ಟ ಆಗಲಿಲ್ಲ ಮತ್ತು ನಾನು ನಿರಾಕರಿಸಿದೆ. ಆದರೆ ಆತ ಇದು ನನ್ನ ಲಾಭದ ಬಂದ ದುಡ್ಡಲ್ಲಿ ನೀಡುತ್ತಿದ್ದೇನೆ. ಇದರಿಂದ ನನ್ನ ವ್ಯವಹಾರಕ್ಕೆ ಯಾವುದೇ ನಷ್ಟವಿಲ್ಲ ಎಂದ. ಈ ಘಟನೆ ಆಗಿ 19 ವರ್ಷದ ಮೇಲೆ ನಾನು ಶ್ರೀಮಂತ ವ್ಯಕ್ತಿಯಾದೆ ಮತ್ತು ಆ ಹುಡುಗನನ್ನು ನೋಡಬೇಕೆಂದೆನಿಸಿತು. ಸುಮಾರು 45 ದಿನಗಳ ನಿರಂತರ ಹುಡುಕಾಟದ ಬಳಿಕ ಆ ವ್ಯಕ್ತಿಯನ್ನು ಕಂಡು ಹಿಡಿದೆ ಮತ್ತು ಆತನಲ್ಲಿ ನಾನು ಯಾರು ಅಂತ ಗೊತ್ತಿದೆಯಾ ಎಂದು ಕೇಳಿದೆ. ಅದಕ್ಕೆ ಆತ ಹೌದು ನೀವು ಪ್ರಖ್ಯಾತ ವ್ಯಕ್ತಿ ಬಿಲ್ ಗೇಟ್ಸ್ ಎಂದು ಉತ್ತರಿಸಿದ.
ಬಿಲ್ ಗೇಟ್ಸ್ ತಮ್ಮ ಮಾತು ಮುಂದುವರಿಸಿ ಸುಮಾರು ವರ್ಷಗಳ ಹಿಂದೆ ನಾನು ನಿಮ್ಮಿಂದ ಎರಡು ದಿನಪತ್ರಿಕೆಯನ್ನು ಯಾವುದೇ ಹಣವನ್ನು ನೀಡದೆ ಉಚಿತವಾಗಿ ಪಡೆದುಕೊಂಡಿದ್ದೆ. ಆದರೆ ಈಗ ನಾನು ಅದಕ್ಕೆ ಪ್ರತಿಯಾಗಿ ಬೇರೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಲು ಸಿದ್ದ ಎಂದರು. ಆದುದರಿಂದ ನಿಮಗೆ ಏನು ಬೇಕು ಕೇಳಿ ಎಂದರು. ಅದಕ್ಕೆ ಆ ವ್ಯಕ್ತಿ ಅದು ಸಾಧ್ಯವಿಲ್ಲದ ಮಾತು ಎಂದು ಹೇಳಿದಾಗ ಬಿಲ್ ಗೇಟ್ಸ್ ಅದಕ್ಕೆ ಕಾರಣ ಕೇಳಿದರು. ಆಗ ಆತ ನಾನು ನಿಮಗೆ ಕೊಡಬೇಕಾದರೆ ಬಡವನಾಗಿದ್ದೆ. ಆದರೆ ಈಗ ನೀವು ಶ್ರೀಮಂತರಾಗಿದ್ದೀರಿ. ಅಂದು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ನೀಡಲು ಮುಂದಾಗಿದ್ದೀರಿ. ಇದು ಯಾವ ರೀತಿ ಸಮನಾಗುತ್ತದೆ ಎಂದು ಪ್ರಶ್ನೆ ಮಾಡಿದ. ಆದುದರಿಂದ ಆ ಪೇಪರ್ ಹುಡುಗನೇ ನನಗಿಂತ ಶ್ರೀಮಂತ ಎಂದು ಬಿಲ್ ಗೇಟ್ಸ್ ಹೇಳಿದರು.
ಯಾವುದೇ ದಾನ ಮಾಡಲು ಅಥವಾ ಪ್ರತ್ಯುಪಕಾರ ಮಾಡಲು ಸಿರಿವಂತನಾದರೆ ಮಾತ್ರ ಸಾಧ್ಯವಿಲ. ದಾನ ಮಾಡುವ ಮನಸ್ಸು ಇರಬೇಕು ಎಂದು ಆತ ನನಗೆ ಮನವರಿಕೆ ಮಾಡಿ ಕೊಟ್ಟ. ಆದುದರಿಂದ ಆತನೇ ನನಗಿಂತ ಸಿರಿವಂತ ಎಂದು ಹೇಳಿದರು. ಎಷ್ಟೇ ಹಣವಿದ್ದರೂ ದಾನ ಮಾಡುವ ಮನಸಿಲ್ಲದಿದ್ದರೆ ಅದು ನಗಣ್ಯ ಎಂದರಿತ ಬಿಲ್ ಗೇಟ್ಸ್ ತಮ್ಮ ಲಾಭಾಂಶದಲ್ಲಿ ಸ್ವಲ್ಪ ಭಾಗ ಬಡವರಿಗಾಗಿಯೇ ಮೀಸಲಿಟ್ಟರು.








