ಬೆಂಗಳೂರು: ನಗರದ ವೈಟ್ ಫೀಲ್ಡ್ ನಲ್ಲಿ (Whitefield) ನಾಪತ್ತೆಯಾಗಿದ್ದ ಬಾಲಕ ಹೈದರಾಬಾದ್ ನ ನಾಂಪಲ್ಲಿ ಎಂಬಲ್ಲಿ ಪತ್ತೆಯಾಗಿದ್ದಾನೆ.
12 ವರ್ಷದ ಬಾಲಕ ಪರಿಣವ್ ನನ್ನು ಪೊಲೀಸರು ಪತ್ತೆ ಹಚ್ಚಿದ್ದು, ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ. ಜ. 21ರಂದು ಬಾಲಕ ವೈಟ್ ಫೀಲ್ಡ್ ನಲ್ಲಿ ಟ್ಯೂಷನ್ ಮುಗಿಸಿ ನಾಪತ್ತೆಯಾಗಿದ್ದ. ತಂದೆ ತಡವಾಗಿ ಬಂದಾಗ ಬಾಲಕ ಅಲ್ಲಿ ಇರಲಿಲ್ಲ. ಹೀಗಾಗಿ ಮೆಟ್ರೋ ಹಾಗೂ ಮೆಜೆಸ್ಟಿಕ್ ನಲ್ಲಿ ವಿದ್ಯಾರ್ಥಿಯ ಚಲನವಲನ ಪತ್ತೆ ಹಚ್ಚಲು ಸಿಸಿಟಿವಿ ಪರಿಶೀಲಿಸಲಾಗಿತ್ತು.
ಆತ ಹೇಗೆ ಹೈದರಾಬಾದ್ ತಲುಪಿದ್ದಾನೆ ಎಂಬುವುದು ಮಾತ್ರ ತಿಳಿದಿಲ್ಲ. ಪರಿಣವ್ ತಾಯಿ ನಿವೇದಿತಾ ಅವರು ತಮ್ಮ ಮಗ ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ವಿದ್ಯಾರ್ಥಿ ಹಣಕ್ಕಾಗಿ ತನ್ನ ಪಾರ್ಕರ್ ಪೆನ್ ಮಾರಾಟ ಮಾಡುತ್ತಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆತ ಟ್ಯೂಷನ್ ನಿಂದ ಮಾರತ್ತಹಳ್ಳಿವರೆಗೆ ನಡೆದು ಬಂದು ನಂತರ ಬಸ್ ಹತ್ತಿರುವುದ ದೃಶ್ಯ ಕೂಡ ಲಭ್ಯವಾಗಿತ್ತು. ಈ ಕುರಿತು ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.








